ADVERTISEMENT

ಕಾರ್ಯಕರ್ತರನ್ನು ಹುರಿದುಂಬಿಸಲಿರುವ ಮೋದಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಕಾರ್ಯಕರ್ತರನ್ನು ಹುರಿದುಂಬಿಸಲಿರುವ ಮೋದಿ
ಕಾರ್ಯಕರ್ತರನ್ನು ಹುರಿದುಂಬಿಸಲಿರುವ ಮೋದಿ   

ಬೆಂಗಳೂರು: ಒಂದು ದಿನದ ಭೇಟಿಗಾಗಿ ಭಾನುವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 2.15ಕ್ಕೆ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದ ಪಾರ್ಕಿಂಗ್‌ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸುಮಾರು ಹತ್ತು ಸಾವಿರ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಸೇರಲಿದ್ದಾರೆ. ಕಾರ್ಯಕರ್ತರೊಂದಿಗೆ ಮುಖಾಮುಖಿ ಆಗಲಿರುವ ಪ್ರಧಾನಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರ ಉತ್ಸಾಹ ನೋಡಿಕೊಂಡು ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಬಗ್ಗೆ ಪ್ರಸ್ತಾಪಿಸಬಹುದು.  ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಅಕಸ್ಮಾತ್‌ ನೇರವಾಗಿ ಚುನಾವಣೆ ಕುರಿತು ಪ್ರಸ್ತಾಪ ಮಾಡದಿದ್ದರೂ ಪರೋಕ್ಷವಾಗಿಯಾದರೂ ತಮ್ಮ ಸರ್ಕಾರದ ಮೂರೂವರೆ ವರ್ಷದ ಸಾಧನೆ, ನೋಟು ಅಮಾನ್ಯಿಕರಣ, ಸರಕು ಮತ್ತು ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ಆಗಿರುವ ಅನುಕೂಲ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವಂತೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡುವ ಸಂಭವವಿದೆ ಎಂದು ಮೂಲಗಳು ಸ್ಪಷ್ಟಪಡಿಸಲಿವೆ.

ಬೀದರ್‌ ರೈಲ್ವೆ ನಿಲ್ದಾಣದಲ್ಲಿ ಸಂಜೆ ಆರು ಗಂಟೆಗೆ ಬೀದರ್‌– ಕಲಬುರಗಿ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿರುವ ಪ್ರಧಾನಿ ತಮ್ಮ ಇಡೀ ಭಾಷಣವನ್ನು ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಬಳಸಿಕೊಳ್ಳುವ ನಿರೀಕ್ಷೆಯಿದೆ. ಹಿಂದಿನ ಯುಪಿಎ ಸರ್ಕಾರದ ದುರಾಡಳಿತ ಕುರಿತು ಟೀಕೆ ಮಾಡುವ ಸಾಧ್ಯತೆಯಿದೆ. ತಮ್ಮ ನೇತೃತ್ವದ ಸರ್ಕಾರದ ಸಾಧನೆಗಳನ್ನು ಅವರು ಸಾರ್ವಜನಿಕರ ಮುಂದೆ ಪಟ್ಟಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸ್ವಾಗತಕ್ಕೆ ಕಾರ್ಯಕರ್ತರನ್ನು ಸಂಘಟಿಸುವ ಜವಾಬ್ದಾರಿಯನ್ನು ವಿಧಾನ ಪರಿಷತ್‌ ಸದಸ್ಯ ಲಹರ್‌ಸಿಂಗ್‌, ಮುಖಂಡರಾದ ಮಹೇಂದ್ರ ಮೋದಿ, ಶಿವಕುಮಾರ್‌ ಹಾಗೂ ಸತೀಶ್‌ ಅವರಿಗೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನ ಮಂಡಲ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್. ಕೆ.ಎಸ್‌. ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ. ಸದಾನಂದಗೌಡ, ಅನಂತಕುಮಾರ ಹೆಗಡೆ ಹಾಜರಿರುತ್ತಾರೆ.

ತಡವಾಗಿ ಆಹ್ವಾನ– ಮುಖ್ಯಮಂತ್ರಿ ಅಸಮಾಧಾನ

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆ ಬೀದರ್‌ನಲ್ಲಿ ನಡೆಯುವ ರೈಲ್ವೆ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ್ದಾರೆ.

‘ಬೀದರ್‍ ಕಾರ್ಯಕ್ರಮಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ತಡವಾಗಿ ಆಹ್ವಾನ ನೀಡಿದ್ದಾರೆ. ಎರಡು ದಿನದ ಹಿಂದೆಯಷ್ಟೆ ಆಹ್ವಾನ ಪತ್ರಿಕೆ ತಲುಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ರೈಲ್ವೆ ಯೋಜನೆಗಳ ವೆಚ್ಚದಲ್ಲಿ ರಾಜ್ಯ ಸರ್ಕಾರ ಅರ್ಧ ಭರಿಸುತ್ತದೆ. ಜೊತೆಗೆ ಜಮೀನನ್ನು ಉಚಿತವಾಗಿ ನೀಡುತ್ತಿದೆ. ಹೀಗಿದ್ದರೂ ಕಾರ್ಯಕ್ರಮ ರೂಪುರೇಷೆ ಕುರಿತು ಪೂರ್ವಭಾವಿಯಾಗಿ ಚರ್ಚಿ ಮಾಡದೆ, ಕೊನೆ ಗಳಿಗೆಯಲ್ಲಿ ಆಹ್ವಾನ ನೀಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಪ್ರಧಾನಿ ಭಾಗವಹಿಸುವ ಸಮಾರಂಭದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸರ್ಕಾರದ ಪರವಾಗಿ ಸಚಿವ ದೇಶಪಾಂಡೆ ಬೀದರ್‌ಗೆ ಹೋಗುತ್ತಾರೆ’ ಎಂದರು.

ಮುಖ್ಯಮಂತ್ರಿ ಸಂಜೆ 4.30ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಮೈಸೂರು ಜಿಲ್ಲೆ ಪ್ರವಾಸಕ್ಕೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.