ADVERTISEMENT

ಕಾಲಾವಕಾಶ ಕೇಳಲಿರುವ ರಾಜ್ಯ ಸರ್ಕಾರ

ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿವರ ಕೋರಿರುವ ಐ.ಟಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳು ಜನವರಿ ಒಂದರಿಂದ ಮಾರ್ಚ್‌ ಅಂತ್ಯದವರೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದ ವಿವರ ನೀಡಲು ಕೊಂಚ ಕಾಲಾವಕಾಶ ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ.

ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಬಿ.ಆರ್‌. ಬಾಲಕೃಷ್ಣನ್‌ ಇತ್ತೀಚೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದು, ಚುನಾವಣೆ ವೇಳೆ ಬಳಕೆ ಮಾಡುವ ಉದ್ದೇಶದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಇದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಕೇಳಿದ್ದರು.

ಅದರಂತೆ ರಾಜ್ಯ ಸರ್ಕಾರವು ಆದಾಯ ತೆರಿಗೆ ಇಲಾಖೆಗೆ ಇಂದು ಮಾಹಿತಿ ಕಳುಹಿಸಬೇಕಿತ್ತು. ಆದರೆ, ಲೋಕೋಪಯೋಗಿ, ಕಂದಾಯ, ಇಂಧನ, ಜಲ ಸಂಪನ್ಮೂಲ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಣ ಕುರಿತು ಇನ್ನೂ ಮಾಹಿತಿ ಸಂಗ್ರಹಿಸುತ್ತಿವೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ವರದಿಗಳು ಪ್ರಕಟವಾಗುತ್ತಿವೆ. ರಾಜ್ಯ ಸರ್ಕಾರ ಮಾಹಿತಿ ಪಡೆದು ಕಳುಹಿಸುವ ಮೊದಲೇ ಇಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬ ವರದಿಗಳು ಹೇಗೆ ಪ್ರಕಟವಾಗುತ್ತಿವೆ ಎಂದು ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.