ADVERTISEMENT

ಕಾಲೇಜುಗಳ ವಿರುದ್ಧ ಕ್ರಮಕ್ಕೆ ಮೀನ ಮೇಷ

ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಿಂದ ನಿಯಮ ಉಲ್ಲಂಘನೆ

ಎ.ಎಂ.ಸುರೇಶ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ವಾಮಮಾರ್ಗದ ಮೂಲಕ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡಿರುವ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ.

ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು  ಅಕ್ರಮವಾಗಿ ಸೀಟುಗಳನ್ನು ಹಂಚಿಕೆ ಮಾಡಿರುವುದನ್ನು ಸರ್ಕಾರವೇ ರಚಿಸಿದ್ದ ಸಮಿತಿ ಪತ್ತೆಹಚ್ಚಿ ವರದಿ ನೀಡಿದೆ. ಇಷ್ಟಾದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ.

ಅಲ್ಪಸಂಖ್ಯಾತ ಕಾಲೇಜುಗಳು ನಡೆಸಿರುವ ಅವ್ಯವಹಾರಗಳ ಮಾಹಿತಿ ಗೊತ್ತಿದ್ದರೂ ಸರ್ಕಾರ ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳಲು ಹಿಂಜರಿ ಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಶೇ 25ರಷ್ಟು ಸೀಟುಗಳನ್ನು ಮಾತ್ರ ಸರ್ಕಾರಕ್ಕೆ ನೀಡುತ್ತವೆ. ಇನ್ನುಳಿದ ಶೇ 75ರಷ್ಟು ಸೀಟುಗಳಲ್ಲಿ ಶೇ 66ರಷ್ಟು ಸೀಟುಗಳನ್ನು ಭಾಷಾ ಅಲ್ಪಸಂಖ್ಯಾತರಿಗೆ ನೀಡಬೇಕು.

ತುಳು ಭಾಷಾ ಅಲ್ಪಸಂಖ್ಯಾತ ಕಾಲೇಜು ಎಂದು ಮಾನ್ಯತೆ ಪಡೆದುಕೊಂಡಿದ್ದರೆ, ಆ ಸಮುದಾಯ­ದವರಿಗೇ ಶೇ 66ರಷ್ಟು ಸೀಟುಗಳನ್ನು ನೀಡಬೇಕು. ಆಡಳಿತ ಮಂಡಳಿಯಲ್ಲೂ ಮೂರನೇ ಎರಡರಷ್ಟು ಸದಸ್ಯರು ತುಳು ಸಮುದಾಯದವರು ಇರಬೇಕು ಎಂಬ ನಿಯಮ ಇದೆ.

ಆದರೆ, ಮಂಗಳೂರಿನ ಎ.ಜೆ.ಇನ್‌ಸ್ಟಿ ಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌, ಶ್ರೀನಿವಾಸ ವೈದ್ಯಕೀಯ ಕಾಲೇಜು, ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು, ಬೆಂಗಳೂರಿನ ಎಂವಿಜೆ ವೈದ್ಯಕೀಯ ಕಾಲೇಜು, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ವೈದೇಹಿ ವೈದ್ಯಕೀಯ ಕಾಲೇಜು,  ಸಪ್ತಗಿರಿ ವೈದ್ಯಕೀಯ ಕಾಲೇಜುಗಳು ಅಲ್ಪಸಂಖ್ಯಾತರಿಗೆ ಶೇ 66ರಷ್ಟು ಸೀಟು ಗಳನ್ನು ನೀಡಿಲ್ಲ ಎಂದು ಪ್ರವೇಶ ಮೇಲ್ವಿಚಾರಣೆಗೆ ರಚಿಸಿದ್ದ ಪ್ರೊ.ಆರ್‌.ವೆಂಕಟರಾಮಯ್ಯ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ನಿಯಮ ಉಲ್ಲಂಘನೆ ಮಾಡಿರುವ ಕಾರಣ ಈ ಕಾಲೇಜುಗಳಿಗೆ ನೀಡಿದ್ದ ‘ಅಲ್ಪಸಂಖ್ಯಾತ ಸ್ಥಾನಮಾನ’ವನ್ನು ಕಳೆದ ಜುಲೈನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಆಗಿನ ಕಾರ್ಯದರ್ಶಿ ಡಾ.ಗೋವಿಂದರಾಜ್‌ ಅಮಾನತು ಗೊಳಿಸಿದ್ದರು.

ಇದಾದ ನಂತರ ಮೇಲಿನ ಏಳೂ ಕಾಲೇಜುಗಳಿಗೆ ಎರಡು ಬಾರಿ ಷೋಕಾಸ್‌ ನೋಟಿಸ್‌ ನೀಡಿ, ಅಲ್ಪಸಂಖ್ಯಾತ ಸ್ಥಾನಮಾನವನ್ನು ಯಾಕೆ ರದ್ದುಗೊಳಿಸಬಾರದು ಎಂದು ವಿವರಣೆ ಕೇಳಲಾಗಿತ್ತು. ಆದರೆ, ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಬಗ್ಗೆ ದಾಖಲೆಗಳನ್ನು ನೀಡುವಂತೆ ಕಾಲೇಜುಗಳಿಗೆ ಸೂಚಿಸ ಲಾಗಿತ್ತು. ಆದರೆ, ಯಾವ ಕಾಲೇಜು ಗಳೂ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರವೇಶದಲ್ಲಿ ನಡೆದಿರುವ ಅಕ್ರಮಗಳ ಮಾಹಿತಿಯನ್ನು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಇಕ್ಬಾಲ್‌ ಅಹ್ಮದ್‌ ಸರಡಗಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳ ಗಮನಕ್ಕೂ ತರಲಾಗಿತ್ತು.

ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ವಾಪಸ್‌ ಪಡೆದು ಶೇ 40ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ಮೂಲಕ ಹಂಚಲು ವೈದ್ಯಕೀಯ ಶಿಕ್ಷಣ ಇಲಾಖೆ ಉದ್ದೇಶಿಸಿತ್ತು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಮುಂದೆ ಈ ಸಂಬಂಧ ಪ್ರಸ್ತಾವನೆ ಇಡಲಾಗಿತ್ತು.

ಆದರೆ, ರಾಜಕೀಯ ಒತ್ತಡದಿಂದಾಗಿ ಅಲ್ಪಸಂಖ್ಯಾತ ಸ್ಥಾನಮಾನ ರದ್ದು ಪಡಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮತ್ತೊಮ್ಮೆ ಏಳೂ ಕಾಲೇಜುಗಳಿಗೆ ನೋಟಿಸ್‌ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಇಲಾಖೆಯ ಕಾರ್ಯ ದರ್ಶಿ, ಉಪ ಕಾರ್ಯದರ್ಶಿ ಬದ ಲಾಗಿದ್ದಾರೆ. ಹಿಂದಿನವರು ತೆಗೆದು ಕೊಂಡಿರುವ ನಿರ್ಧಾರಕ್ಕೆ ಹೊಸಬರು ಬದ್ಧರಾಗಿರುತ್ತಾರೋ ಅಥವಾ ಈ ಪ್ರಕರಣವನ್ನು ಅಷ್ಟಕ್ಕೆ ಬಿಡುತ್ತಾರೋ ಎಂಬ ಮಾತುಗಳು ಸಚಿವಾಲಯದಲ್ಲಿ ಕೇಳಿಬರುತ್ತಿವೆ.

ಅಡ್ಡಗಾಲಾದ ಹೊಸ ಷರತ್ತುಗಳು
ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌ –ಕೆ ಜೊತೆ ಒಪ್ಪಂದ ಮಾಡಿಕೊಳ್ಳಲು ರೂಪಿಸಿರುವ ಕರಡಿನಲ್ಲಿ ಈ ಬಾರಿ ಕೆಲ ಹೊಸ ಷರತ್ತುಗಳನ್ನು ವಿಧಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ರೂಪಿಸಿರುವ ಈ ಕರಡನ್ನು ಕಾಮೆಡ್‌ – ಕೆಗೆ ಕಳುಹಿಸಲಾಗಿತ್ತು. ಆದರೆ, ಕಾಮೆಡ್‌ –ಕೆ ಇದಕ್ಕೆ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ನಾತಕೋತ್ತರ ವೈದ್ಯಕೀಯ ವಿಭಾಗದ ಪ್ರತಿ ವಿಷಯದಲ್ಲೂ ಕಾಮೆಡ್‌ – ಕೆ ಶೇ 33ರಷ್ಟು ಸೀಟು ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಆದರೆ, ಕಾಮೆಡ್‌ –ಕೆ ನವರು ಕ್ಲಿನಿಕಲ್‌, ಪ್ರೀ ಕ್ಲಿನಿಕಲ್‌, ಪ್ಯಾರಾ ಕ್ಲಿನಿಕಲ್‌ ಸೇರಿಸಿ ಒಟ್ಟಾರೆ ಸೀಟುಗಳಲ್ಲಿ ಶೇ 33ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡುತ್ತಾರೆ.

ಕ್ಲಿನಿಕಲ್‌ ವಿಭಾಗದಲ್ಲಿ ಬರುವ ರೇಡಿಯಾಲಜಿ, ಮೆಡಿಸಿನ್‌ ಮೊದಲಾದ ವಿಷಯಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ವಿಷಯಗಳಲ್ಲಿ ಕಾಮೆಡ್‌–ಕೆ ನವರು ಶೇ 33ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಿಲ್ಲ ಎನ್ನುತ್ತವೆ ವೈದ್ಯಕೀಯ ಇಲಾಖೆ ಮೂಲಗಳು.

ಈ ವರ್ಷ ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಒಪ್ಪಂದದ ಕರಡಿನಲ್ಲಿ ಹೊಸ ಷರತ್ತು ಗಳನ್ನು ಹಾಕಲಾಗಿತ್ತು. ಆದರೆ, ಕಾಮೆಡ್‌ – ಕೆ ನವರಿಗೆ ಇದು ಇಷ್ಟವಾಗಿಲ್ಲ ಎನ್ನಲಾಗಿದೆ.

ಕರಡಿನಲ್ಲಿ ಹೊಸ ಅಂಶಗಳು ಸೇರಲು ವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ವಿ.ರಶ್ಮಿ ಅವರೇ ಕಾರಣ. ಅವರನ್ನು ವರ್ಗಾವಣೆ ಮಾಡಿ ಎಂದು ಖಾಸಗಿ ಕಾಲೇಜುಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

ಆದರೆ, ಏಕಾಏಕಿ ವರ್ಗಾವಣೆ ಮಾಡುವುದು ಬೇಡ ಎಂದು ಭಾವಿಸಿದ ಸರ್ಕಾರ ರಜೆ ಮೇಲೆ ಕಳುಹಿಸಿದೆ. ಸರ್ಕಾರ ಮತ್ತು ಕಾಮೆಡ್‌ – ಕೆ ನಡುವೆ ಒಪ್ಪಂದ ಆಗುವವರೆಗೂ ರಶ್ಮಿ ಅವರನ್ನು ರಜೆ ಮೇಲೆ ಕಳುಹಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ರಶ್ಮಿ ಅವರು ಈ ಎಲ್ಲ ಪ್ರಕ್ರಿಯೆಗಳಿಂದ ಬೇಸತ್ತು 120 ದಿನಗಳ ದೀರ್ಘ ರಜೆ ಪಡೆದು ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT