ಧಾರವಾಡ: `ಎಪಿಎಲ್ ಪಡಿತರ ಕಾರ್ಡ್‌ದಾರರಿಗೆ ನೀಡುತ್ತಿದ್ದ ಅಕ್ಕಿಯನ್ನು ಬಂದ್ ಮಾಡುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ದರ ಹೆಚ್ಚಳವಾಗಲಿದೆ. ಇದರಿಂದ ಕಾಳಸಂತೆಕೋರರಿಗೆ ಅನುಕೂಲವಾಲಿದೆ. ಇದನ್ನೆಲ್ಲ ನೋಡಿದರೆ ರಾಜ್ಯ ಸರ್ಕಾರ ಕಾಳಸಂತೆಕೋರರೊಂದಿಗೆ ಒಪ್ಪಂದ ಮಾಡಿಕೊಂಡಂತೆ ಕಾಣುತ್ತದೆ' ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದರು.
`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ನಿರ್ಧಾರ ಕೈಗೊಂಡು, ಆ ಬಳಿಕ ತಪ್ಪು ಸರಿಗಳ ವಿಚಾರ ಮಾಡುತ್ತಾರೆ. ಆದ್ದರಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ 30 ಕೆ.ಜಿ. ಅಕ್ಕಿ ನಿರ್ಧಾರ ಪ್ರಕಟಿಸಿ ಇದೀಗ ಪೂರೈಸಲಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರಿಗೆ 30 ಕೆ.ಜಿ. ಅಕ್ಕಿ ಕೊಡಲು ಮುಂದಾಗಿರುವ ಅವರು, ಎಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿದ್ದ ಮಾಸಿಕ 10 ಕೆ.ಜಿ. ಅಕ್ಕಿಯನ್ನು ನಿಲ್ಲಿಸಿದ್ದು ಏಕೆ, ಎಪಿಎಲ್ ಕಾರ್ಡ್‌ದಾರರನೇನು ಭಾರಿ ಶ್ರೀಮಂತರೇ' ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.
`ಅಕ್ಕಿ ನಿಲ್ಲಿಸುವುದರಿಂದ 34 ಲಕ್ಷ ಎಪಿಎಲ್ ಕುಟುಂಬಗಳಿಗೆ ತೀವ್ರ ತೊಂದರೆಯಾಗಲಿದೆ. ಅಕ್ಕಿ ಖರೀದಿಸಲು ಅನಿವಾರ್ಯವಾಗಿ ಅವರು ಮುಕ್ತ ಮಾರುಕಟ್ಟೆಗೆ ಬರಬೇಕಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು' ಎಂದು ಒತ್ತಾಯಿಸಿದರು.
`ಕೇಂದ್ರದ ಪೆಟ್ರೋಲ್ ಬೆಲೆ ಏರಿಕೆ ನಿರ್ಧಾರ, ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಇದೇ 17ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಲಿದೆ' ಎಂದು ಜೋಶಿ ಪ್ರಕಟಿಸಿದರು.
`ನಿಮ್ಮ ಸರ್ಕಾರವೂ ಬಸ್ ಪ್ರಯಾಣದರವನ್ನು ಏರಿಸಿತ್ತಲ್ಲವೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಈ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಮುಗಿಯುವಷ್ಟರಲ್ಲೇ ಶೇ 16ರಷ್ಟು ಭಾರಿ ಏರಿಕೆ ಮಾಡಿದೆ. ಆದರೆ ನಮ್ಮ ಸರ್ಕಾರ ಕೇವಲ ಶೇ 5ರಷ್ಟು ಹೆಚ್ಚಳ ಮಾಡಿತ್ತು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.