ADVERTISEMENT

ಕಾವಲುಗಾರ ಹುದ್ದೆಗೆ ಸ್ನಾತಕೋತ್ತರರು

ಸಮಾಜ ಕಲ್ಯಾಣ ಇಲಾಖೆ; ದೈಹಿಕ ಪರೀಕ್ಷೆಗೆ ಬಿಇ, ಎಂಎ, ಎಂಎಸ್‌ಸಿ, ಎಂಕಾಂ ಪಡೆದವರು ಭಾಗಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಪಿ.ಸುದರ್ಶನ್‌
ಪಿ.ಸುದರ್ಶನ್‌   

* ಎಂ.ಎನ್‌.ಯೋಗೇಶ್‌

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ಡಿ ದರ್ಜೆಯ ರಾತ್ರಿ ಕಾವಲುಗಾರ ಹುದ್ದೆಗೆ ಗುರುವಾರ ನಡೆದ ನೇರ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಬಿಇ, ಎಂಎಸ್‌ಸಿ, ಎಂಕಾಂ, ಎಂಎ, ಬಿಇಡಿ, ಡಿಪ್ಲೊಮಾ ಓದಿದವರು ಪಾಲ್ಗೊಂಡು ಗಮನ ಸೆಳೆದರು.

ನಗರದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಪರೀಕ್ಷೆ ನಡೆಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮೇಲೆ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದರು. ಮದ್ದೂರು ತಾಲ್ಲೂಕಿನ ಎಂ.ಎಸ್‌.ಅಕ್ಷಯ್‌ ಬಿಇ ಓದಿದವರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90.72 ಅಂಕ ಪಡೆದಿದ್ದು, ಸರ್ಕಾರಿ ಕೆಲಸದ ಕನಸಿನಿಂದ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು.

ADVERTISEMENT

‘ಬೆಂಗಳೂರಿನಲ್ಲಿ ಐಟಿ ಕ್ಷೇತ್ರ ಬಿದ್ದು ಹೋಗಿದೆ. ವಿದೇಶಕ್ಕೆ ಹೋದವರೆಲ್ಲ ಕೆಲಸ ಕಳೆದುಕೊಂಡು ವಾಪಸ್‌ ಬರುತ್ತಿದ್ದಾರೆ. ಒಂದು ಸಣ್ಣ ಸರ್ಕಾರಿ ಕೆಲಸ ಸಿಕ್ಕರೆ ಸಾಕು ಎಂದು ಕಾವಲುಗಾರ ಹುದ್ದೆಗೆ ಅರ್ಜಿ ಹಾಕಿಕೊಂಡೆ’ ಎಂದು ಸಾಫ್ಟ್‌ವೇರ್‌ ಕಂಪೆನಿಯೊಂದರ ಉದ್ಯೋಗಿ ಅಕ್ಷಯ್‌ ಹೇಳಿದರು.

ಸ್ನಾತ್ತಕೋತ್ತರ ಪದವೀಧರರು:  ಕೆ.ಆರ್‌.ಪೇಟೆ ತಾಲ್ಲೂಕು ಮತ್ತಿಕೆರೆ ಗ್ರಾಮದ ಸುಮಾ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಎಂಎ ಓದಿದವರು. ಬಿಇಡಿ ಕೂಡ ಪೂರೈಸಿ ಶಿಕ್ಷಕಿಯಾಗಲು ಆಸೆ ಪಟ್ಟಿದ್ದರು.

‘ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಅಲ್ಲಿ ಮೂರು ತಿಂಗಳಾದರೂ ಸಂಬಳ ಕೊಡುತ್ತಿರಲಿಲ್ಲ. ಹೈರಾಣಾಗಿ ಹೋಗಿದ್ದೆ. ಇದು ಸರ್ಕಾರಿ ಕೆಲಸವಾಗಿರುವ ಕಾರಣ ಇಲ್ಲಿಗೆ ಬಂದಿದ್ದೇನೆ’ ಎಂದು ಸುಮಾ ಹೇಳಿದರು.

ಕೆ.ಆರ್‌.ಪೇಟೆ ತಾಲ್ಲೂಕು ಕುಪ್ಪಹಳ್ಳಿ ಗ್ರಾಮದ ಕೆ.ಸಿ.ದೇವರಾಜು ಭೂಗೋಳ ವಿಜ್ಞಾನದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದಾರೆ. ಹಲವು ಸ್ಪರ್ಧಾತ್ಮಕ ಪದವಿ ಪರೀಕ್ಷೆ ಎದುರಿಸಿದ್ದಾರೆ. ‘ಭೂಗೋಳ ವಿಜ್ಞಾನದಲ್ಲಿ ಅವಕಾಶಗಳು ಕಡಿಮೆ. ಹೆಚ್ಚಿನ ಕಾಲೇಜುಗಳಲ್ಲಿ ಐಚ್ಚಿಕ ವಿಷಯವಾಗಿ ಭೂಗೋಳ ವಿಜ್ಞಾನ ಇಲ್ಲ. ಹೀಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಜೀವನ ನಿರ್ವಹಣೆಗೆ ಕೆಲಸವೊಂದು ಬೇಕಷ್ಟೆ’ ಎಂದು ದೇವರಾಜು ಹೇಳಿದರು.

ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಸಿದ್ದರಾಜು ಮೈಸೂರು ವಿ.ವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪೂರೈಸಿದ್ದಾರೆ. ಹುಣಸೂರಿನ ಮಧುಕುಮಾರ್‌ ಇತಿಹಾಸದಲ್ಲಿ ಎಂಎ, ಮಳವಳ್ಳಿ ತಾಲ್ಲೂಕಿನ ಪಿ.ಎಸ್‌.ಅನಿಲ್‌ಕುಮಾರ್‌ ಎಂಕಾಂ, ಕುಣಿಗಲ್‌ ತಾಲ್ಲೂಕಿನ ಅಮೃತೂರು ಗ್ರಾಮದ ಶ್ರುತಿ ಬಿಇಡಿ, ಕೆ.ಆರ್‌.ನಗರದ ಶೋಭಾ ಎಂಕಾಂ, ತುಮಕೂರಿನ ರಮೇಶ್‌ ಬಿಬಿಎಂ, ಮಂಡ್ಯದ ಯೋಗಲಕ್ಷ್ಮಿ ಡಿಪ್ಲೊಮಾ ಶಿಕ್ಷಣ ಪಡೆಇದ್ದಾರೆ. ಇವರೆಲ್ಲ ರಾತ್ರಿ ಕಾವಲುಗಾರ ಹುದ್ದೆಗೆ ಪರೀಕ್ಷೆ ಎದುರಿಸಿದರು.

‘ಸೋಮವಾರ ನಡೆದ ಅಡುಗೆ ಸಹಾಯಕ ಹುದ್ದೆ ಪರೀಕ್ಷೆಯಲ್ಲೂ ಬಿಇ ಓದಿದ್ದವರು ಬಂದಿದ್ದರು. ಇಲ್ಲಿ ಭಾಗವಹಿಸಿದ್ದ ಶೇ 90ರಷ್ಟು ಅಭ್ಯರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಕೆಲವರು ಹೇಳಿಕೊಳ್ಳಲು ಅಂಜುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗುವುದಿಲ್ಲ. ಜಿಲ್ಲೆಯಲ್ಲಿ 33 ಹುದ್ದೆಗಳಷ್ಟೇ ಖಾಲಿ ಇವೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

***

ಸಾಫ್‌್ಟವೇರ್‌ ಕಂಪೆನಿ ವ್ಯವಸ್ಥಾಪಕ
ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ (ಕ್ವಾಲಿಟಿ ಮ್ಯಾನೇಜರ್‌) ಆಗಿರುವ ಮಂಡ್ಯದ ಪಿ.ಸುದರ್ಶನ್‌ ಡಿಪ್ಲೊಮಾ ಓದಿದವರು. ನಾಲ್ಕೈದು ವರ್ಷಗಳ ಅನುಭವ ಹೊಂದಿದ್ದು, ರಾತ್ರಿ ಕಾವಲುಗಾರ ಹುದ್ದೆಯ ಪರೀಕ್ಷೆಗೆ ಹಾಜರಾದರು.

‘ನಮ್ಮ ಊರಿಗೆ ವಾಪಸ್‌ ಬರಬೇಕು ಎಂಬ ಆಸೆ ಇತ್ತು. ಹೀಗಾಗಿ, ಯಾವುದಾದರೂ ಸರ್ಕಾರಿ ಕೆಲಸ ಪಡೆದು ಇಲ್ಲೇ ಇರಲು ನಿರ್ಧರಿಸಿದ್ದೆ. ಹೀಗಾಗಿ, ಕಾವಲುಗಾರ ಹುದ್ದೆಗೆ ಅರ್ಜಿ ಹಾಕಿದ್ದೆ’ ಎಂದು ಸುದರ್ಶನ್‌ ತಿಳಿಸಿದರು.

***

ಸರ್ಕಾರಿ ಕೆಲಸದಲ್ಲಿ ಜೀವನ ಭದ್ರತೆ ಸಿಗುತ್ತದೆ ಎಂಬ ಕಾರಣಕ್ಕೆ ಯುವಜನರು ಸರ್ಕಾರಿ ಸೇವೆಗೆ ಸೇರಲು ಇಚ್ಛೆ ಪಡುತ್ತಿದ್ದಾರೆ. ಸಣ್ಣ ಹುದ್ದೆಯಾದರೂ ಸರಿ, ಅವರಿಗೆ ಸರ್ಕಾರಿ ಕೆಲಸವೇ ಬೇಕಾಗಿದೆ
ಬಿ.ಮಾಲತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.