ADVERTISEMENT

`ಕಾವೇರಿಗಿಂತ ಮದುವೆ ಊಟವೇ ದೊಡ್ಡದು'

ಬಿಜೆಪಿ ಶಾಸಕರಿಗೆ ನಾಣಯ್ಯ ಗೇಲಿ

ಪ್ರವೀಣ ಕುಲಕರ್ಣಿ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಸುವರ್ಣ ವಿಧಾನಸೌಧ (ಬೆಳಗಾವಿ): `ರಾಜ್ಯಕ್ಕೆ ಗಂಡಾಂತರ ಎದುರಾಗಿರುವಾಗ ಬಿಜೆಪಿ ಶಾಸಕರು ಇಲ್ಲಿದ್ದು ಪರಿಹಾರ ಹುಡುಕುವ ಬದಲು ತಮ್ಮ ನಾಯಕನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದಾರೆ. ಕಾವೇರಿ ನೀರಿಗಿಂತ ಮದುವೆ ಊಟವೇ ಅವರಿಗೆ ದೊಡ್ಡದಾಗಿದೆ' ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಗೇಲಿ ಮಾಡಿದರು.

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಕಾವೇರಿ ವಿಷಯವಾಗಿ ವಿರೋಧ ಪಕ್ಷದ ಸದಸ್ಯರು ನಡೆಸಿದ ಧರಣಿ ಸಮರ್ಥಿಸಿ ಅವರು ಮಾತನಾಡಿದರು.

`ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳಿಗೆ ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕಿಂತ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುವ ತವಕ. ಅಧಿವೇಶನ ನಡೆದಾಗ ಚರ್ಚೆಯಲ್ಲಿ ಭಾಗವಹಿಸಿ ರೈತರ ಹಿತ ರಕ್ಷಣೆಗೆ ಮುಂದಾಗದೆ ಅವರೆಲ್ಲ ರಾಜಕೀಯ ಭವಿಷ್ಯದ ಚಿಂತೆಯಲ್ಲಿ ಮುಳುಗಿದ್ದಾರೆ' ಎಂದು ಕುಟುಕಿದರು.

`ಯಡಿಯೂರಪ್ಪ ಅವರ ವೆಂಟಿಲೇಟರ್‌ನಿಂದ (ಕೃತಕ ಉಸಿರಾಟ) ಜೀವಿಸುತ್ತಿರುವ ಈ ಸರ್ಕಾರದಿಂದ ರೈತರ ಹಿತ ರಕ್ಷಣೆ ಸಾಧ್ಯವಿಲ್ಲ. ಆದ್ದರಿಂದ ಆ ವೆಂಟಿಲೇಟರ್ ತೆಗೆದು ಹಾಕುವಂತೆ ನಾನು ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ' ಎಂದು ಚುಚ್ಚಿದರು.

`ಸರ್ಕಾರ ಏನೇ ಮಾಡಿದರೂ ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಮುಚ್ಚಿಡಲು ಸಾಧ್ಯವಿಲ್ಲ. ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದ ಅವರು, `ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಯಾವ ಪಕ್ಷವೂ ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು. ವಿಧಾನ ಸಭೆ ಮತ್ತು ಪರಿಷತ್ತಿನ ಎಲ್ಲ 300 ಶಾಸಕರು ಒಟ್ಟಾಗಿ ಪ್ರಧಾನಿ ನಿವಾಸದ ಮುಂದೆ ಧರಣಿ ಮಾಡೋಣ. ನೀವೆಲ್ಲ ತಯಾರಿದ್ದೀರಾ' ಎಂದು ಕಾಂಗ್ರೆಸ್ ಸದಸ್ಯರನ್ನು ಕೆಣಕಿದರು.

`ಬೆಳಗಾವಿಯಲ್ಲಿ ಅಧಿವೇಶನ ನಡೆದಿರುವ ಕಾರಣ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳೂ ಚರ್ಚೆಗೆ ಬರಬೇಕಿದೆ. ಆದರೆ, ಕಾವೇರಿ ಪ್ರಶ್ನೆ ಇದೇ ಸಂದರ್ಭದಲ್ಲಿ ಧುತ್ತೆಂದು ಅವತರಿಸಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದಿಲ್ಲ. ಹೀಗಾಗಿ ಪ್ರತಿಭಟನೆ ಕೈಬಿಡುವುದು ಸಾಧ್ಯವಾಗುತ್ತಿಲ್ಲ' ಎಂದು ಪ್ರತಿಪಾದಿಸಿದರು.

ನೋವಿನ ನಿರ್ಧಾರ: ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದ ಸಭಾನಾಯಕ ವಿ.ಸೋಮಣ್ಣ ಮತ್ತು ಉಪ ಮುಖ್ಯಮಂತ್ರಿ ಆರ್.ಅಶೋಕ, `ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ದಾಖಲಾಗುವ ಭೀತಿಯಿಂದ ಕಾನೂನು ತಜ್ಞರ ಸಲಹೆ ಪಡೆದು, ಬೇರೆ ದಾರಿ ಇಲ್ಲದೆ ನೀರು ಹರಿಸಲಾಗಿದೆ. ಸರ್ಕಾರ ನೋವಿನಿಂದ ಈ ನಿರ್ಧಾರ ಕೈಗೊಂಡಿದೆ. ರೈತರ ಹಿತ ರಕ್ಷಣೆಗೆ ಎಲ್ಲ ಯತ್ನ ಮಾಡುತ್ತಿದೆ' ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.