ADVERTISEMENT

ಕಾವೇರಿ ಉಸ್ತುವಾರಿ ಸಮಿತಿ ಆದೇಶ: ಸಿಆರ್‌ಎಗೆ ಮೇಲ್ಮನವಿ

ವಿರೋಧ ಪಕ್ಷ ನಾಯಕರಿಂದ ಸರ್ಕಾರದ ತರಾಟೆ, ಉಭಯ ಸದನಗಳಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 19:37 IST
Last Updated 10 ಡಿಸೆಂಬರ್ 2012, 19:37 IST
`ಕರ್ನಾಟಕ ಗೃಹ ಮಂಡಳಿ'ಯಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆಗ್ರಹಿಸಿ, ಕಾಂಗ್ರೆಸ್ ಪಕ್ಷದ ಹುಣಸೂರು ಎಂಎಲ್‌ಎ ಎಚ್.ಪಿ.ಮಂಜುನಾಥ್ ಘೋಷ ಫಲಕದೊಂದಿಗೆ ಗಮನ ಸೆಳೆದರು
`ಕರ್ನಾಟಕ ಗೃಹ ಮಂಡಳಿ'ಯಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆಗ್ರಹಿಸಿ, ಕಾಂಗ್ರೆಸ್ ಪಕ್ಷದ ಹುಣಸೂರು ಎಂಎಲ್‌ಎ ಎಚ್.ಪಿ.ಮಂಜುನಾಥ್ ಘೋಷ ಫಲಕದೊಂದಿಗೆ ಗಮನ ಸೆಳೆದರು   

ಸುವರ್ಣ ವಿಧಾನಸೌಧ (ಬೆಳಗಾವಿ): `ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಭಾನುವಾರ ಸಂಜೆವರೆಗೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದು, ಅದರ ಬಳಿಕ ನಿಲ್ಲಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ 12 ಟಿಎಂಸಿ ಅಡಿ ನೀರು ಬಿಡಬೇಕು ಎನ್ನುವ ಕಾವೇರಿ ಉಸ್ತುವಾರಿ ಸಮಿತಿಯ (ಸಿಎಂಸಿ) ಆದೇಶವನ್ನು ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಮುಂದೆ ಪ್ರಶ್ನಿಸಲಾಗಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೋಮವಾರ ವಿಧಾನಸಭೆಗೆ ತಿಳಿಸಿದರು.

`ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಜನತೆಗೆ ಸರ್ಕಾರ ದ್ರೋಹ ಬಗೆದಿದೆ' ಎಂದು ದೂರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಮೂರನೇ ದಿನವೂ ಉಭಯ ಸದನಗಳಲ್ಲಿ ಧರಣಿ ನಡೆಸಿದರು. `ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ, ಸದನವನ್ನು ಕತ್ತಲೆಯಲ್ಲಿ ಇಟ್ಟು, ನೀರು ಬಿಟ್ಟಿರುವುದು ಸರಿಯಲ್ಲ' ಎಂದು ಉಭಯ ಪಕ್ಷಗಳ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವಿಷಯದಲ್ಲಿ ಸರ್ಕಾರದ ಸ್ಪಷ್ಟ ಹೇಳಿಕೆ ಬಯಸಿ ಸೋಮವಾರ ಕೂಡ ಧರಣಿ ನಡೆಸಿದರು.

ಗದ್ದಲ, ಕೋಲಾಹಲ ಹೆಚ್ಚಾದ ಕಾರಣ ಕಲಾಪವನ್ನು ಅರ್ಧ ಗಂಟೆ ಅವಧಿಗೆ ಮುಂದೂಡಲಾಯಿತು. ಬಳಿಕ ಸ್ಪೀಕರ್ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಸಂಧಾನ ಸಭೆ ನಡೆಯಿತು. ಅದರ ಫಲವಾಗಿ ಮತ್ತೆ ಕಲಾಪ ಆರಂಭವಾಯಿತು.
ವಿಧಾನ ಪರಿಷತ್ತಿನಲ್ಲಿ ಸಭಾನಾಯಕ ವಿ.ಸೋಮಣ್ಣ, ಸರ್ಕಾರದ ಪರ ಹೇಳಿಕೆ ನೀಡಿ, ನೀರು ನಿಲ್ಲಿಸಿರುವುದಾಗಿ ಹೇಳಿದರು. ವಾದ- ವಿವಾದ ನಂತರ ಅಲ್ಲಿಯೂ ಧರಣಿ ವಾಪಸ್ ಪಡೆದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಶೆಟ್ಟರ್ ಮಾತನಾಡಿ, `ಭಾನುವಾರ ಸಂಜೆ ನಂತರ ನೀರು ನಿಲ್ಲಿಸಲಾಗಿದೆ. ಈ ನಡುವೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯ ಸಿಎಂಸಿ, ಡಿಸೆಂಬರ್ ತಿಂಗಳಲ್ಲಿ 12 ಟಿಎಂಸಿ ಅಡಿ ನೀರು ಬಿಡಬೇಕು ಎನ್ನುವ ಆದೇಶ ನೀಡಿದೆ. ಇದು ರಾಜ್ಯಕ್ಕೆ ಮಾರಕವಾದ ಆದೇಶ. ಇದರ ವಿರುದ್ಧ ಸಿ.ಆರ್.ಎ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ' ಎಂದು ಹೇಳಿದರು.

`ನವೆಂಬರ್, ಡಿಸೆಂಬರ್ ವೇಳೆಗೆ, ಉತ್ತಮ ಮಳೆ ಆಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೆ 10.37 ಟಿಎಂಸಿ ಅಡಿ, ಸಂಕಷ್ಟ ಪರಿಸ್ಥಿತಿ ಮುಂದುವರಿದರೆ ಕನಿಷ್ಠ 6.12 ಟಿಎಂಸಿ ಅಡಿ ನೀರು ಬಿಡಬೇಕಾಗುತ್ತದೆ ಎಂದು ಸೆಪ್ಟೆಂಬರ್‌ನಲ್ಲಿ ನಡೆದ ಸಿಎಂಸಿ ಸಭೆಯಲ್ಲಿ ತೀರ್ಮಾನ ಆಗಿತ್ತು. ಈ ಸಂಬಂಧ ಆದೇಶ ಆಗಿತ್ತು.

ದುರ್ದೈವದ ಸಂಗತಿ ಅಂದರೆ, ಇತ್ತೀಚಿಗೆ ನಡೆದ ಸಭೆಯಲ್ಲಿ ಈ ಎರಡೂ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ತಾನು ನೀಡಿದ್ದ ಆದೇಶಕ್ಕೆ ವ್ಯತಿರಿಕ್ತವಾದ ಆದೇಶವನ್ನು `ಸಿಎಂಸಿ' ನೀಡಿದೆ. ರಾಜ್ಯದ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಸಭೆಯಲ್ಲಿ ಭಾಗವಹಿಸಿ, ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ' ಎಂದು ಶೆಟ್ಟರ್ ಸಭೆಯ ಗಮನಕ್ಕೆ ತಂದರು.

ಈ ಎಲ್ಲ ಅಂಶಗಳನ್ನು ಪ್ರಸ್ತಾಪಿಸಿ, ಸಿಆರ್‌ಎಗೆ ಮೇಲ್ಮನವಿ ಸಲ್ಲಿಸಿದ್ದು, ಸಿಎಂಸಿ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಲಾಗಿದೆ. ಸುಪ್ರೀಂಕೋರ್ಟ್‌ಗೂ ಈ ಕುರಿತು ಮಾಹಿತಿ ನೀಡಲಾಗುವುದು ಎಂದುರು. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, `ರಾಜ್ಯ ಸರ್ಕಾರ ಸದನ ನಡೆಯುವ ಸಂದರ್ಭದಲ್ಲಿ ಅದರ ಗಮನಕ್ಕೂ ತರದೆ ನೀರು ಬಿಟ್ಟಿರುವುದು ಸರಿಯಾದ ಕ್ರಮವಲ್ಲ.

ADVERTISEMENT

ಸರ್ಕಾರಕ್ಕೆ ರೈತ ಪರವಾದ ಕಾಳಜಿ ಇಲ್ಲ' ಎಂದು ಟೀಕಿಸಿದರು.ಕೋಲಾಹಲ: ಜೆಡಿಎಸ್‌ನ ಎಚ್.ಸಿ.ಬಾಲಕೃಷ್ಣ ಮಾತನಾಡಿ `ಕಾವೇರಿ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಂಡಿವೆ' ಎಂದು ಆರೋಪಿಸಿದರು.

ಸುಪ್ರೀಂಕೋರ್ಟ್ 50 ಸಾವಿರ ಕ್ಯೂಸೆಕ್ ನೀರು ಬಿಡಿ ಎಂದರೆ, ಕೇಂದ್ರದ ಹಿಡಿತದಲ್ಲಿರುವ ಸಿಎಂಸಿ 12 ಟಿಎಂಸಿ ನೀರು ಬಿಡುವಂತೆ ಸೂಚಿಸುತ್ತದೆ. ಕೇಂದ್ರದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ತಮಿಳುನಾಡು ಪರವಾದ ಇಂತಹ ತೀರ್ಮಾನಗಳನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತಿದೆ' ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

ವಿ.ಎಲ್.ಪಾಟೀಲರಿಗೆ ಸಂತಾಪ
ಬೆಳಗಾವಿ:
ಮೈಸೂರು ರಾಜ್ಯದ ಮೊದಲನೇ ವಿಧಾನಸಭೆ ಸದಸ್ಯರಾಗಿದ್ದ ಬೆಳಗಾವಿಯ ಜಿಲ್ಲೆಯ ರಾಯಬಾಗದ ವಿ.ಎಲ್.ಪಾಟೀಲ್ ಅವರ ನಿಧನಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು. ಪಾಟೀಲ್ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು.

`ಕೆಎಚ್‌ಬಿ ಕರ್ಮಕಾಂಡ ತನಿಖೆಯಾಗಲಿ'
ಸುವರ್ಣ ವಿಧಾನಸೌಧ (ಬೆಳಗಾವಿ):
`ಕರ್ನಾಟಕ ಗೃಹ ಮಂಡಳಿ'ಯಲ್ಲಿ (ಕೆಎಚ್‌ಬಿ) ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಅವರು ಘೋಷ ಫಲಕದೊಂದಿಗೆ ವಿಧಾನಸಭೆಯಲ್ಲಿ ಎಲ್ಲರ ಗಮನ ಸೆಳೆದರು.

ಸಂತಾಪ ಸೂಚನೆ ನಂತರ ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಧರಣಿ ಆರಂಭಿಸಿದರು. ಈ ಸಂದರ್ಭದಲ್ಲಿ `ಕೆಎಚ್‌ಬಿ ಕರ್ಮಕಾಂಡ ತನಿಖೆಯಾಗಲಿ' ಎಂದು ಬರೆದಿದ್ದ ಘೋಷ ಫಲಕವನ್ನು ಜೇಬಿನಿಂದ ಹೊರತೆಗೆದ ಹುಣಸೂರು ಶಾಸಕರೂ ಆದ ಮಂಜುನಾಥ್ ಅವರು ತನಿಖೆಗೆ ಒತ್ತಾಯಿಸಿದರು.  ಸ್ಪೀಕರ್ ಬೋಪಯ್ಯ ಅವರು ಮಂಜುನಾಥ್ ಅವರ ವರ್ತನೆ ಬಗ್ಗೆ ಆಕ್ಷೇಪಿಸಿದರು.

ಈ ರೀತಿ ಘೋಷ ಫಲಕಗಳನ್ನು ತಂದು ಸದನದಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಹೇಳಿ, ಅದನ್ನು ವಶಕ್ಕೆ ಪಡೆಯುವಂತೆ ಮಾರ್ಷಲ್‌ಗಳಿಗೆ ಸೂಚಿಸಿದರು. ಮಾರ್ಷಲ್‌ಗಳು ಅದನ್ನು ವಶಕ್ಕೆ ಪಡೆದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, `ಕೆಎಚ್‌ಬಿ ಅಧ್ಯಕ್ಷರು ಅಕ್ರಮದಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.