ADVERTISEMENT

ಕಾವೇರಿ ಕಾವು : ಕೆಆರ್‌ಎಸ್ ಭದ್ರತೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 8:40 IST
Last Updated 3 ಅಕ್ಟೋಬರ್ 2012, 8:40 IST

ಮಂಡ್ಯ (ಪಿಟಿಐ) : ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿರುವ ಜಿಲ್ಲೆಯ ರೈತರ ಹೋರಾಟ  ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಕೆಆರ್‌ಎಸ್‌ ಭದ್ರತೆಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಿದೆ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ, ಕಬಿನಿಯಿಂದ 9000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಆದರೆ, ಇದಕ್ಕೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗುತ್ತಿದ್ದು, ಮಂಡ್ಯದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ, ಕೆಆರ್‌ಎಸ್‌ನ 1 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಇದೇ ವೇಳೆ, ಕಾವೇರಿ ಹೋರಾಟ ತೀವ್ರಗೊಳಿಸಲು ರಾಜ್ಯದ ಹಲವು ಕಡೆಗಳಿಂದ ಸಾವಿರಾರು ರೈತರು ಮಂಡ್ಯದತ್ತ ಬರುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ಮಂಡ್ಯದ ಉಪ ಆಯುಕ್ತ ಬಿ. ಎನ್. ಕೃಷ್ಣಯ್ಯ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಕೆಆರ್‌ಎಸ್ ಅಣೆಕಟ್ಟಿನ ಬಳಿ ಬೀಡು ಬಿಟ್ಟಿರುವ ಎಸ್‌ಪಿ ಕೌಶಲೇಂದ್ರ ಕುಮಾರ್ ತಿಳಿಸಿದರು. ಇನ್ನೊಂದೆಡೆ ರೈತರು ಐದನೇ ದಿನವೂ ಮೈಸೂರು -ಬೆಂಗಳೂರು ಹೆದ್ದಾರಿ ತಡೆ ನಡೆಸಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.