ADVERTISEMENT

ಕಾವೇರಿ: ದೆಹಲಿಗೆ ಕಾಂಗ್ರೆಸ್ ನಿಯೋಗ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಕಾಂಗ್ರೆಸ್ ನಿಯೋಗ ಸದ್ಯದಲ್ಲೇ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೆಶ್ವರ್ ಶನಿವಾರ ಇಲ್ಲಿ ತಿಳಿಸಿದರು.

ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಇತರ ಹಲವು ಮುಖಂಡರು, ಕಾನೂನು ತಜ್ಞರು, ಸಾಹಿತಿಗಳೊಂದಿಗೆ ಚರ್ಚಿಸಿದ ನಂತರ ದೆಹಲಿಗೆ ಪಕ್ಷದ ನಿಯೋಗ ಒಯ್ಯುವ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಮತ್ತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ  ಕಾನೂನು ತಜ್ಞರಾದ ಬಿ.ವಿ.ಆಚಾರ್ಯ, ಎ.ಎನ್.ಜಯರಾಂ ಹೇಳಿದ್ದಾರೆ. ಆದ್ದರಿಂದ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರ ಮತ್ತು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದರು.

ತಮಿಳುನಾಡಿಗೆ ನಿತ್ಯ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು ವಿವಾದಕ್ಕೆ ಮೂಲವಾಯಿತು. ರಾಜ್ಯದ 143 ತಾಲ್ಲೂಕುಗಳಲ್ಲಿ ಬರ ಇದೆ. ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ಬೆಂಗಳೂರಿನಲ್ಲಿ ಮೂರನೇ ಒಂದು ಭಾಗಕ್ಕೆ ಮಾತ್ರ ಕಾವೇರಿ ನೀರು ಪೂರೈಸಲಾಗುತ್ತಿದೆ. ಮೂರನೇ ಎರಡು ಭಾಗಕ್ಕೆ ನೀರು ಪೂರೈಸಲು ಆಗುತ್ತಿಲ್ಲ. ಈ ಅಂಶಗಳನ್ನು ಸಿ.ಆರ್.ಎಗೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದರು.

ರಾಜ್ಯದಲ್ಲಿ ಶೇ 74ರಷ್ಟು ಬಿತ್ತನೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ತಮಿಳುನಾಡು ಸರ್ಕಾರ ಶೇ 33ರಷ್ಟು ಮಾತ್ರ ಬಿತ್ತನೆ ಆಗಿದೆ ಎಂದು ಸುಪ್ರೀಂ ಕೋರ್ಟ್ ಮತ್ತು ಸಿ.ಆರ್.ಎಗೆ ತಿಳಿಸಿದೆ. ಮಳೆಯಾಗದಿದ್ದರೆ ಶೇ 74ರಷ್ಟು ಬಿತ್ತನೆ ಹೇಗೆ ಆಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಷಯದಲ್ಲೂ ಸರ್ಕಾರ ಎಡವಿದೆ ಎಂದು ದೂರಿದರು.

`ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ 38 ಟಿಎಂಸಿ ಅಡಿ ನೀರು ಬಿಡುವುದಾಗಿ ಸರ್ಕಾರವೇ ಹೇಳಿದೆ. ಕಾವೇರಿ ನದಿ ಪ್ರಾಧಿಕಾರದ ಸಭೆ ಇದೇ 15ರ ವರೆಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದಾಗ, ಸಂಧಾನ ನಡೆಸಿ ಐದು-ಆರು ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಹೇಳುವ ಬದಲು, ಸಭೆಯನ್ನು ಬಹಿಷ್ಕರಿಸಿದ್ದು ಸರಿಯಲ್ಲ~ ಎಂದು ಆಕ್ಷೇಪಿಸಿದರು.                                                                                                                                                                                      ಗೂಬೆ ಕೂರಿಸುವ ಯತ್ನ: ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಪ್ರಧಾನಿ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಪಕ್ಷದ ಮುಖಂಡ ಸಿದ್ದರಾಮಯ್ಯ ಆರೋಪಿಸಿದರು.`ನಮ್ಮಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಿದೆ. ಆದರೆ ತಮಿಳುನಾಡಿನಲ್ಲಿ ಅಂತರ್ಜಲದಿಂದ 45 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ.

ಇವತ್ತಿನವರೆಗೂ ಆ ನೀರನ್ನು ಬಳಸಿಕೊಂಡಿಲ್ಲ. ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ಭಾಗದ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 30 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈ ವಿಷಯವನ್ನು ಸರ್ಕಾರ, ಸುಪ್ರೀಂ ಕೋರ್ಟ್ ಮತ್ತು ಸಿಆರ್‌ಎಗೆ ಪರಿಣಾಮಕಾರಿಯಾಗಿ ತಿಳಿಸಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.

`ಈ ವಿಷಯದಲ್ಲಿ ರಾಜಕೀಯ ಮಾಡದೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವಾಸ್ತವದ ಆಧಾರದ ಮೇಲೆ ಸಂಕಷ್ಟಸೂತ್ರ ರೂಪಿಸುವಂತೆ ಒತ್ತಡ ಹೇರಬೇಕು~ ಎಂದು ಅವರು ಆಗ್ರಹಿಸಿದರು.
 

`ಉದ್ದೇಶಪೂರ್ವಕ ಅಲ್ಲ~
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾವೇರಿ ನದಿ ಪ್ರಾಧಿಕಾರದ ಸದಸ್ಯರು. ಅವರ ಭೇಟಿಗೆ ಅವಕಾಶ ನೀಡಿದರೆ, ಉಳಿದ ಸದಸ್ಯರ ಭೇಟಿಗೂ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ಶೆಟ್ಟರ್ ಭೇಟಿಗೆ ನಿರಾಕರಿಸಿರಬಹುದು. ಉದ್ದೇಶಪೂರ್ವಕವಾಗಿ ಅವಕಾಶ ನೀಡಿಲ್ಲ ಎನ್ನುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT