ADVERTISEMENT

ಕಾಶೀ ಮಠದ ಸುಯತೀಂದ್ರತೀರ್ಥ ಸ್ವಾಮೀಜಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:30 IST
Last Updated 17 ಜನವರಿ 2016, 19:30 IST
ಕಾಶೀ ಮಠದ ಸುಯತೀಂದ್ರತೀರ್ಥ ಸ್ವಾಮೀಜಿ ಇನ್ನಿಲ್ಲ
ಕಾಶೀ ಮಠದ ಸುಯತೀಂದ್ರತೀರ್ಥ ಸ್ವಾಮೀಜಿ ಇನ್ನಿಲ್ಲ   

ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಧ್ಯಾತ್ಮಿಕ ಗುರು, ಕಾಶೀ ಮಠಾಧೀಶರಾದ ಸುಧೀಂದ್ರ ತೀರ್ಥ ಸ್ವಾಮೀಜಿ (91) ಅವರು ಭಾನುವಾರ ಬೆಳಗಿನ ಜಾವ ಉತ್ತರಾಖಂಡ ರಾಜ್ಯದ ಹರಿದ್ವಾರದ ವ್ಯಾಸಾಶ್ರಮದಲ್ಲಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ ಅವರ ಇಚ್ಛೆಯಂತೆ ಮುಂಬೈನಿಂದ ಅವರನ್ನು ಹರಿದ್ವಾರದ ವ್ಯಾಸಾಶ್ರಮಕ್ಕೆ ಕರೆತರಲಾಗಿತ್ತು.

ಅವರ ಪಟ್ಟಶಿಷ್ಯ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ವ್ಯಾಸಾಶ್ರಮದ ಆವರಣದಲ್ಲಿ ಭಾನುವಾರ ರಾತ್ರಿ ಅವರ ಅಂತಿಮಸಂಸ್ಕಾರ (ವೃಂದಾವನ ಪ್ರಕ್ರಿಯೆ) ನೆರವೇರಿತು. ಕಾಶೀಮಠ ಪರಂಪರೆಯಲ್ಲಿ 20ನೇ ಯತಿಗಳಾಗಿ ಸುಮಾರು ಆರೂವರೆ ದಶಕಗಳ ಕಾಲ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು.

ಪರಿಚಯ: ಕೇರಳದ ಎರ್ನಾಕುಲಂನಲ್ಲಿ 1926ರಲ್ಲಿ ಜನಿಸಿದ ಸ್ವಾಮೀಜಿ ಅವರ ಮೂಲ ಹೆಸರು ಸದಾಶಿವ ಶೆಣೈ. ಅವರ ತಂದೆ ರಾಮದಾಸ ಶೆಣೈ ಅಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಟ್ರಸ್ಟಿಯಾಗಿದ್ದರು. ಹುಟ್ಟೂರಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದರು. ಆಗಿನ ಕಾಶೀಮಠಾಧೀಶರಾದ ಸುಕೃತೀಂದ್ರ ಸ್ವಾಮೀಜಿ, ಬಾಲಕನಲ್ಲಿದ್ದ ಆಧ್ಯಾತ್ಮಿಕ ಒಲವನ್ನು ಗಮನಿಸಿ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವ ಹಂಬಲ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 1944ರ ಮೇ 24ರಂದು ಮೂಲ್ಕಿಯ ವೆಂಕಟರಮಣ ದೇವಸ್ಥಾನದಲ್ಲಿ ಸನ್ಯಾಸ ದೀಕ್ಷೆ ನಡೆಯಿತು.

ಸುಕೃತೀಂದ್ರ ಸ್ವಾಮೀಜಿ 1949ರಲ್ಲಿ ದೈವಾಧೀನರಾದ ನಂತರ ಕಾಶಿ ಮಠ ಸಂಸ್ಥಾನವನ್ನು ಮುನ್ನಡೆಸಿಕೊಂಡು, ಮಠದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಶ್ರೇಯಸ್ಸು ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.