ಬೆಂಗಳೂರು (ಪಿಟಿಐ): ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ಬಾಕಿ ವಸೂಲಿ ಮಾಡುವ ಪ್ರಯತ್ನವನ್ನು ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ, ಸಂಸ್ಥೆಯ ಆಸ್ತಿಯನ್ನು ಇತರರು ಸ್ವಾಧೀನಕ್ಕೆ ಪಡೆಯುವ ಮುನ್ನ ತನ್ನ ಬಾಕಿಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ತನ್ನ ನೌಕರರ ವೇತನದಿಂದ ಆದಾಯ ತೆರಿಗೆಯನ್ನು ಕಡಿತ ಮಾಡಿದ್ದ ಕಿಂಗ್‌ಫಿಷರ್ ಏರ್‌ಲೈನ್ಸ್, ಆ ಮೊತ್ತವನ್ನು ತೆರಿಗೆ ಇಲಾಖೆಗೆ ಪಾವತಿ ಮಾಡಿರಲಿಲ್ಲ. ಈ ರೀತಿ ರೂ 350 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಬಾಕಿ ವಸೂಲಿಗಾಗಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಎಲ್ಲ ಆಸ್ತಿಗಳನ್ನೂ ಜಫ್ತಿ ಮಾಡುವ ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಚಾಲನೆ ನೀಡಿತ್ತು.
ಈ ಮಧ್ಯೆ, ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿರುವ ಬ್ಯಾಂಕುಗಳು ಬಾಕಿ ವಸೂಲಿಗಾಗಿ ಒಂದು ಒಕ್ಕೂಟ ರಚಿಸಿಕೊಂಡಿವೆ. ಈ ಒಕ್ಕೂಟವು ಕಿಂಗ್‌ಫಿಷರ್ ಏರ್‌ಲೈನ್ಸ್ ಮುಂಬೈ ನಗರದಲ್ಲಿ ಹೊಂದಿರುವ ‘ಕಿಂಗ್‌ಫಿಷರ್ ಹೌಸ್’ ಅನ್ನು ವಶಕ್ಕೆ ಪಡೆಯಲು ಮುಂದಾಗಿವೆ. ಈ ಒಕ್ಕೂಟದ ಪ್ರಯತ್ನಕ್ಕೆ ತಡೆ ನೀಡುವಂತೆ ಕೋರಿ ಕಿಂಗ್‌ಫಿಷರ್ ಏರ್‌ಲೈನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾ ಮಾಡಿದೆ.
‘ಮುಂಬೈ ವಿಮಾನ ನಿಲ್ದಾಣದ ಸಮೀಪ ಇರುವ ಕಿಂಗ್‌ಫಿಷರ್ ಹೌಸ್ ಅನ್ನೂ ಇಲಾಖೆಯು ಜಫ್ತಿ ಮಾಡಲು ಪ್ರಕ್ರಿಯೆ ಆರಂಭಿಸಿದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಕಾಯ್ದೆಯ ಪ್ರಕಾರ ಜಫ್ತಿಗೆ ಗುರುತಿಸಿದ ಆಸ್ತಿಯ ವಿಲೇವಾರಿ ಆದರೆ, ಸರ್ಕಾರಕ್ಕೆ ಬರಬೇಕಾದ ಹಣವನ್ನು ಆದ್ಯತೆಯ ಮೇಲೆ ಪಾವತಿಸಬೇಕಾಗುತ್ತದೆ’ ಎಂದು ಆದಾಯ ತೆರಿಗೆ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
‘ಬ್ಯಾಂಕುಗಳ ಒಕ್ಕೂಟವು ಆಸ್ತಿಯನ್ನು ವಶಕ್ಕೆ ಪಡೆಯುವ ಮುನ್ನವೇ ಇಲಾಖೆಯು ಬಾಕಿ ವಸೂಲಿಗೆ ಮುಂದಾಗಲಿದೆ. ಇಲಾಖೆಯ ಬಾಕಿ ಪಾವತಿ ಆದ ಬಳಿಕವೇ ಬ್ಯಾಂಕುಗಳ ಒಕ್ಕೂಟ ಮುಂದುವರಿಯಬೇಕಾಗುತ್ತದೆ’ ಎಂದು ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.