ಬೆಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶಕ್ಕೆ ಬಳಕೆಯಾಗಿದ್ದ 25 ಕಿ.ಮೀ. ಉದ್ದದ ಅರಣ್ಯ ಪ್ರದೇಶ ಈಗ ವನ್ಯಜೀವಿಗಳ ವಿಹಾರಕ್ಕೆ ಪುನಃ ದೊರೆಯಲಿದೆ.
ಉಡುಪಿ ಬಳಿಯ ನಂದಿಕೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಸಾಗಿಸಲು ರಾಜ್ಯ ಸರ್ಕಾರ ಅರಣ್ಯ ಸಲಹಾ ಸಮಿತಿಯಿಂದ ಅನುಮತಿ ಕೋರಿತ್ತು. ಈ ಮಾರ್ಗ ಚಿಕ್ಕಮಗಳೂರಿನ ಬಾಳೂರು ರಾಜ್ಯ ಅರಣ್ಯ ಪ್ರದೇಶದ ಮೂಲಕ ಹಾದು ಹೋಗಲಿದೆ. ಈ ಪ್ರದೇಶದ ಒಟ್ಟು 8.3 ಕಿ.ಮೀ. ಉದ್ದದ ನಿತ್ಯಹರಿದ್ವರ್ಣದ ಕಾಡಿನ ಮೂಲಕ ಈ ಮಾರ್ಗ ಹಾದುಹೋಗಲಿದೆ.
ಯೋಜನೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ ಅರಣ್ಯ ಸಲಹಾ ಸಮಿತಿ, ಈ ಯೋಜನೆ ಅನುಷ್ಠಾನಗೊಳ್ಳುವ ಮೊದಲು, ಕೆಐಒಸಿಎಲ್‌ಗೆ ವಿದ್ಯುತ್ ಸಂಪರ್ಕ ನೀಡಲು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ತೆಗೆಯಬೇಕು ಎಂದು ಶಿಫಾರಸು ಮಾಡಿತ್ತು.
ಶಿಫಾರಸಿನ ಅನ್ವಯ ಸರ್ಕಾರ, ಈ ವಿದ್ಯುತ್ ಮಾರ್ಗವನ್ನು ತೆಗೆಯುವ ಕಾರ್ಯವನ್ನು ಕಳೆದ ವಾರದಿಂದ ಆರಂಭಿಸಿದೆ. ಇದರಿಂದ ತೊಂದರೆಗೆ ಒಳಗಾಗುವ ಕುಟುಂಬಗಳಿಗೆ ಬದಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿ ಆಫ್ ಇಂಡಿಯಾದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.