ADVERTISEMENT

‘ಕುಮಾರ’ ಸರ್ಕಾರ ಟೇಕಾಫ್‌

ಸಂಪುಟದ ಅರ್ಧದಷ್ಟು ಸಚಿವರಿಂದ ಅಧಿಕಾರಿಗಳ ಜೊತೆ ಸಭೆ: ಪ್ರಜಾತೀರ್ಪು ಬಂದ ತಿಂಗಳ ಬಳಿಕ ಕಳೆಗಟ್ಟಿದ ವಿಧಾನಸೌಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
‘ಕುಮಾರ’ ಸರ್ಕಾರ ಟೇಕಾಫ್‌
‘ಕುಮಾರ’ ಸರ್ಕಾರ ಟೇಕಾಫ್‌   

ಬೆಂಗಳೂರು: ‘ಪ್ರಜಾ ತೀರ್ಪು’ ಬಂದ ಸರಿಸುಮಾರು ಒಂದು ತಿಂಗಳ ಬಳಿಕ ರಾಜ್ಯ ಸರ್ಕಾರ ಟೇಕಾಫ್‌ ಆಗಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ನಾಲ್ಕು ತಿಂಗಳಿಂದ ಕಳೆಗುಂದಿದ್ದ ವಿಧಾನಸೌಧ– ವಿಕಾಸಸೌಧ ಆ ಮೂಲಕ, ಮತ್ತೆ ಹಿಂದಿನ ವೈಭವಕ್ಕೆ ಮರಳಿದೆ.

ಅಧಿಕಾರ ಸೂತ್ರ ಹಿಡಿದಿರುವ ಜೆಡಿಎಸ್‌– ಕಾಂಗ್ರೆಸ್‌ ದೋಸ್ತಿ ಸಂಪುಟದ ಅರ್ಧದಷ್ಟು ಸಚಿವರು ತಮ್ಮ ಇಲಾಖೆಗಳ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದರು.

ಇದೇ ವೇಳೆ ಸಾರ್ವಜನಿಕರೂ ಸಚಿವರನ್ನು ಭೇಟಿಯಾಗಲು ‘ಆಡಳಿತ ಶಕ್ತಿ ಕೇಂದ್ರ’ಗಳತ್ತ ಎಡತಾಕುತ್ತಿದ್ದಾರೆ.

ADVERTISEMENT

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್,  ವಸತಿ ಸಚಿವ ಯು.ಟಿ. ಖಾದರ್, ಸಮಾಜ ಕಲ್ಯಾಣ ಪ್ರಿಯಾಂಕ್‌ ಖರ್ಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಅಧಿಕಾರಿಗಳ ಸಭೆ ನಡೆಸಿದರು.

ಹದಿನಾರು ವೈದ್ಯಕೀಯ ಕಾಲೇಜುಗಳ ಮತ್ತು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ, ಪರಿಚಯ ಮಾಡಿಕೊಳ್ಳುವಂತೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಯೊಬ್ಬರು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಸಚಿವರು, ‘ಅಧಿಕಪ್ರಸಂಗ ಮಾಡಬೇಡಿ, ಎಷ್ಟು ಇದೆಯೋ ಅಷ್ಟು ಮಾತ್ರ ಹೇಳಿ’ ಎಂದರು. ಸಚಿವರ ಮಾತಿನಿಂದ ಬೆದರಿದ ಅಧಿಕಾರಿ, ಮರುಮಾತನಾಡದೆ ಕುಳಿತರು. ಇಡೀ ಸಭೆ ಕೆಲಕ್ಷಣ ಮೌನವಾಯಿತು.

ಮಳೆ, ಬಿರುಗಾಳಿಯಿಂದ ಉಂಟಾಗಿರುವ ಹಾನಿ ಕುರಿತು ಆರ್.ವಿ. ದೇಶಪಾಂಡೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಾರಿಗೆ ಅಧಿಕಾರಿಗಳ ಜೊತೆ ಡಿ.ಸಿ ತಮ್ಮಣ್ಣ ವಿಚಾರ ವಿನಿಮಯ ನಡೆಸಿದರು.

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸಭೆ ನಡೆಸಿದರು.

ವೈದ್ಯಕೀಯ ಇಲಾಖೆ ಅಧಿಕಾರಿಗೆ ಶಿವಕುಮಾರ್‌ ತರಾಟೆ

ವರಿಷ್ಠರು ಖಾತೆ ಬದಲಾವಣೆ ಭರವಸೆ ನೀಡಿದ್ದಾರೆ– ಜಿ.ಟಿ. ದೇವೇಗೌಡ

ಎಂಜಿನಿಯರ್‌ಗಳಿಗೆ ಬಡ್ತಿ–ರೇವಣ್ಣ ಸಮ್ಮತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.