
ಬೆಂಗಳೂರು: `ಎಲ್ಲ ಪುಸ್ತಕಗಳು ಆದರ್ಶವನ್ನು ಬಿತ್ತುತ್ತವೆ. ಅಂತಹ ಪುಸ್ತಕಗಳನ್ನು ಇಂದಿನ ರಾಜಕಾರಣಿಗಳು ಓದಬೇಕು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು.ಸಿವಿಜಿ ಇಂಡಿಯಾ ಸಂಸ್ಥೆಯು ಮಂಗಳವಾರ ಗಾಂಧಿಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ ಹಾಗೂ ಸಿವಿಜಿ ಇಂಡಿಯಾ ಪುಸ್ತಕ ಮಳಿಗೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.
`ಪುಸ್ತಕಗಳನ್ನು ಓದುವುದರಿಂದ ರಾಜಕೀಯದಲ್ಲಿರುವ ಕೆಟ್ಟ ರಾಜಕಾರಣ, ಅಧಿಕಾರ, ಹಣಕ್ಕಾಗಿ ಇರುವ ಆಮಿಷಗಳು ಕಡಿಮೆಯಾಗಬಹುದು. ಪುಸ್ತಕದಲ್ಲಿನ ಆದರ್ಶ ತತ್ವಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.
`ಸಿವಿಜಿ ಇಂಡಿಯಾ ಸಂಸ್ಥೆಯು ಒಮ್ಮೆಗೆ 108 ಪುಸ್ತಕಗಳನ್ನು ಹೊರತಂದಿರುವ ಕಾರ್ಯ ವೈಖರಿ ಪ್ರಶಂಸನೀಯವಾಗಿದೆ~ ಎಂದು ಹೇಳಿದರು.ಸಾರಿಗೆ ಮತ್ತು ಗೃಹ ಸಚಿವ ಆರ್.ಅಶೋಕ ಮಾತನಾಡಿ, `ಬೇರೆ ಭಾಷಿಕರಲ್ಲಿಯೂ ಕನ್ನಡವೆಂಬುದು ಇದೆ. ಅವರನ್ನು ಬೇರೆಯವರೆಂದು ಭಾವಿಸದೆ, ಅವರಿಗೂ ಕನ್ನಡತನವನ್ನು ಕಲಿಸಬೇಕು~ ಎಂದರು. `ಎಲ್ಲ ಪುಸ್ತಕಗಳು ಜನರನ್ನು ತಲುಪಬೇಕು ಆಗಲೇ ಪುಸ್ತಕ ಸಂಸ್ಕೃತಿ ಉಳಿಯುತ್ತದೆ.
ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ಅದಕ್ಕೆ ಎಲ್ಲರೂ ಶ್ರಮ ವಹಿಸಬೇಕು~ ಎಂದು ಹೇಳಿದರು.
`ಹಳ್ಳಿಗಾಡಿನಲ್ಲಿರುವವರು ಕಲೆಯನ್ನು ಲಾಭದ ದೃಷ್ಟಿಯಿಂದ ಮಾಡುವುದಿಲ್ಲ ಬದಲಿಗೆ, ನಮ್ಮ ಸಂಸ್ಕೃತಿ ಉಳಿಯಬೇಕೆಂಬ ಆಸೆಯಿಂದ ಮಾಡುತ್ತಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ~ ಎಂದರು.
`ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಸಾಹಿತ್ಯ ಸಮ್ಮೇಳನ ನಡೆದಾಗ ಸುಮಾರು 8 ಕೋಟಿ ರೂಪಾಯಿಯ ಪುಸ್ತಕಗಳು ಮಾರಾಟವಾದವು. ಇದು ನಮ್ಮ ಜನರಲ್ಲಿರುವ ಭಾಷಾ ಸಂಸ್ಕೃತಿ ಮತ್ತು ಪುಸ್ತಕ ಪ್ರೇಮವನ್ನು ಸಾರಿ ಹೇಳುತ್ತದೆ~ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಎಂ.ಪಿ.ವೀರೇಂದ್ರಕುಮಾರ್ ಮಾತನಾಡಿ, `ಸಾಹಿತಿಗಳ ಬಗ್ಗೆ ಎಲ್ಲೆಲ್ಲೂ ಚರ್ಚೆಗಳಾಗುತ್ತವೆ. ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೇಶದ ಯಾವ ವಿಮಾನ ನಿಲ್ದಾಣಕ್ಕೂ ಸಾಹಿತಿಗಳ ಹೆಸರನ್ನು ಇಡುವ ಚಿಂತನೆ ಇನ್ನು ನಡೆದಿಲ್ಲ~ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ, ಕುವೆಂಪು ನೂರೆಂಟು ನೆನಪು ಮಾಲಿಕೆಯ ಸಂಪಾದಕ ಡಾ.ಬೈರಮಂಗಲ ರಾಮೇಗೌಡ, ಮಾಲಿಕೆಯ ಸಂಚಾಲಕ ಸಿವಿಜಿ ಚಂದ್ರ ಸಮಾರಂಭದಲ್ಲಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.