ADVERTISEMENT

ಕೂಡಗಿ ಸ್ಥಾವರಕ್ಕೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST

ಬೆಂಗಳೂರು: ವಿಜಾಪುರದ ಕೂಡಗಿ ಬಳಿ 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ನಿರ್ಮಾಣಕ್ಕೆ ಹೈಕೋರ್ಟ್ ಗುರುವಾರ ಹಸಿರು ನಿಶಾನೆ ತೋರಿದೆ. ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡು ವಿದ್ಯುತ್ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು `ಪರಿಸರ ರಕ್ಷಣಾ ಸೇವಾ ವೇದಿಕೆ~ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿದೆ. 

  ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ 2009ರ ಜ.12ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಆಗಿರುವ ಒಪ್ಪಂದವನ್ನು ರದ್ದು ಮಾಡುವಂತೆ ಅರ್ಜಿದಾರರು ಕೋರಿದ್ದರು. `ಈಗ ಸ್ವಾಧೀನ ಪಡಿಸಿಕೊಳ್ಳಲಾದ ಕೃಷಿ ಭೂಮಿಯು ಘಟಕ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ. ಸಂಬಂಧಿತ ಇಲಾಖೆಗಳ ಅನುಮತಿ ಪಡೆದುಕೊಂಡಿಲ್ಲ. ಘಟಕಕ್ಕೆ ಅಗತ್ಯ ಇರುವ ಕಲ್ಲಿದ್ದಲ್ಲನ್ನು ಸುಮಾರು 1700 ಕಿ.ಮೀ. ದೂರದಿಂದ ರೈಲಿನಲ್ಲಿ ತರಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಈ ಜಾಗಕ್ಕೆ ಬದಲು ಉತ್ತರ ಕನ್ನಡ ಜಿಲ್ಲೆಯ ತದಡಿ ಇದಕ್ಕೆ ಸೂಕ್ತ ಸ್ಥಳ~ ಎನ್ನುವುದು ಅರ್ಜಿದಾರರ ಹೇಳಿಕೆಯಾಗಿತ್ತು.

ಆದರೆ ಇದಕ್ಕೆ ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಆಕ್ಷೇಪ ವ್ಯಕ್ತಪಡಿಸಿದರು. `ಕೇಂದ್ರ ಸರ್ಕಾರ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ನಂತರವೇ ಕೂಡಗಿಯಲ್ಲಿ ಇದರ ಸ್ಥಾಪನೆಗೆ ಅನುಮತಿ ನೀಡಿದೆ. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಿದರೆ ಅದು ಕರ್ನಾಟಕಕ್ಕೆ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗೂ ಅನುಕೂಲ ಆಗುತ್ತದೆ.

ಸಮೀಪದಲ್ಲಿಯೇ ಇರುವ ಆಲಮಟ್ಟಿ ಜಲಾಶಯದ ನೀರು ಬಳಸಿಕೊಳ್ಳಲು ಕೂಡ ಇದೇ ಜಾಗ ಪ್ರಶಸ್ತವಾಗಿದೆ.`ಭೂಮಾಲೀಕರ ಅನುಮತಿ ಪಡೆದುಕೊಂಡೇ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬರಡು ಜಮೀನಾಗಿದ್ದರೂ ಎಕರೆಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದುದರಿಂದ ಅರ್ಜಿದಾರರ ಆರೋಪಗಳಲ್ಲಿ ಹುರುಳಿಲ್ಲ~ ಎಂದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.