
ಭಾಲ್ಕಿ: ಅಜ್ಜಿ ಗಂಗವ್ವನ ಗುಡಿಸಲಿನಲ್ಲಿ ವಾಸ. ಊರಿನ ಮನೆ ಮನೆಗೆ ಹೂ ನೀಡುವುದು ನಿತ್ಯದ ಕಾಯಕ. ವರ್ಷ ಪೂರ್ತಿ ಹೂ ನೀಡಿದರೂ ಕಾಸು ಇಲ್ಲ. ಹೊಲದಲ್ಲಿ ಧಾನ್ಯಗಳ ರಾಶಿ ಮಾಡುವಾಗ ನೀಡುವ ಉಂಬಳಿಯೇ ಈ ಕುಟುಂಬದ ವಾರ್ಷಿಕ ಆದಾಯ.
ಇದು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 95 ಅಂಕ ಗಳಿಸಿರುವ ಭಾಲ್ಕಿ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿ ಪವನ್ ಹೂಗಾರ ಮನೆಯ ಸ್ಥಿತಿ.
ಊರಲ್ಲಿ ಸ್ವಂತ ಮನೆ ಇಲ್ಲ. ದುಡಿಯಬೇಕೆಂದರೆ ಗುಂಟೆಯಷ್ಟು ಜಮೀನೂ ಇಲ್ಲ. ಕಡು ಬಡತನದಲ್ಲೇ ಬದುಕುತ್ತಿದ್ದರೂ ಪವನ್ ಕಾಶಪ್ಪ ಹೂಗಾರ ಅವರಲ್ಲಿ ಓದುವ ಉತ್ಸಾಹಕ್ಕೇನೂ ಕೊರತೆ ಇಲ್ಲ. ಕುಟುಂಬದ ಸಂಕಷ್ಟಮಯ ಪರಿಸ್ಥಿತಿಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಪಾಳು ಬಿದ್ದ ಗೋಡೆಗಳ ಹಿಂದೆ ತಗಡುಗಳಿಂದ ನಿರ್ಮಿಸಿದ ತಾತ್ಕಾಲಿಕ ಆಸರೆಯಲ್ಲಿ ಅಜ್ಜಿ ಗಂಗಮ್ಮ ಮತ್ತು ತಾಯಿ ಸುಭದ್ರಾ, ತಂದೆ ಕಾಶಪ್ಪ ಅವರೊಂದಿಗೆ ಪವನ್ ವಾಸ.
ಕಡು ಬಡತನದಲ್ಲಿದ್ದರೂ ಅನೇಕರ ಸಹಕಾರ ಈ ಫಲಿತಾಂಶಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಗ್ರಾಮದ ಗೋರಖನಾಥ ಶಾಲೆಯಲ್ಲಿ 7ನೇ ತರಗತಿ, ಗುರುಪಾದ ಶಿವಾಚಾರ್ಯ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿ ಶೇ 92 ರಷ್ಟು ಅಂಕ ಗಳಿಸಿದ್ದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೇವರು ಅವರು ಚನ್ನಬಸವೇಶ್ವರ ಗುರುಕುಲದಲ್ಲಿ ಪವನ್‌ಗೆ ಆಶ್ರಯ ನೀಡಿ, ಉಚಿತ ಪ್ರವೇಶ ಕೊಡಿಸಿದ್ದಾರೆ.
‘ಗುರುಗಳು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿ ಉತ್ತಮ ಫಲಿತಾಂಶ ತಂದಿದ್ದಾನೆ’ ಎನ್ನುತ್ತಾರೆ ಪವನ್‌ರನ್ನು ಗುರುಕುಲಕ್ಕೆ ಪರಿಚಯಿಸಿದ ಉಪನ್ಯಾಸಕ ಅಂಕುಶ ಢೋಲೆ.
ಪವನ್‌ಗೆ ವೈದ್ಯನಾಗಬೇಕು ಎನ್ನುವ ಹಂಬಲವಿದೆ. ಆದರೆ ಅಷ್ಟೊಂದು ಹಣ ಹೊಂದಿಸುವುದು ಹೇಗೆ? ಎನ್ನುವ ಚಿಂತೆ ಪಾಲಕರದ್ದು. ಬಡತನದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗ ಮಗನನ್ನು ಅಪಾರ ಹಣ ಖರ್ಚು ಮಾಡಿ ಓದಿಸುವುದನ್ನು ಕಲ್ಪನೆ ಮಾಡಿಕೊಳ್ಳಲೂ ಆಗುತ್ತಿಲ್ಲ ಎನ್ನುತ್ತಾರೆ ಪೋಷಕರಾದ ಸುಭದ್ರಾಬಾಯಿ, ಕಾಶಪ್ಪ.
ಪವನ್ ಹೆಸರಿನಲ್ಲಿ ಎಸ್‌ಬಿಎಚ್ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ: ಪವನ್ ಹೂಗಾರ್– ಖಾತೆ ಸಂಖ್ಯೆ: 62342488350. (ಮೊಬೈಲ್: 9980932060).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.