ಮಂಗಳೂರು: `ಕೃತಿ ಚೌರ್ಯಮಾಡುವವರಿದ್ದಾರೆ ಎಂದು ಕನ್ನಡದ ಲೇಖಕರೆಲ್ಲ ಮನೆ ಮುಂದೆ ಫಲಕ ಹಾಕಿಕೊಳ್ಳಬೇಕಾಗಿದೆ. ಲೇಖಕರೆಲ್ಲ ಜಾಗೃತರಾಗಬೇಕಿದೆ. ಯಾವ ಸಾಹಿತಿಗೂ ಇಂತಹ ಮೋಸ ಆಗಬಾರದು~ ಎಂದು ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ನೋವಿನಿಂದ ಹೇಳಿದ್ದಾರೆ.
~2011ನೇ ಸಾಲಿನ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ~ಬ್ಯಾರಿ~ ಸಿನಿಮಾ ಕಥೆಗೆ ನನ್ನ `ಚಂದ್ರಗಿರಿ ತೀರದಲ್ಲಿ~ ಕೃತಿಯನ್ನೇ ಬಳಸಿಕೊಳ್ಳಲಾಗಿದೆ. ಇದು ಸ್ಪಷ್ಟ ಕೃತಿಚೌರ್ಯ~ ಎಂದು `ಪ್ರಜಾವಾಣಿ~ ಬಳಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು.
` ಯಾರದೋ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಇಂತಹ ಕೆಲವು ಬ್ಯಾರಿಗಳಿಂದಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ~ ಎಂದು ಕಿಡಿಕಾರಿದರು.
ಪ್ರಶಸ್ತಿ ಬಂದಿತ್ತು: `ಚಂದ್ರಗಿರಿ ತೀರದಲ್ಲಿ ಕೃತಿ ತಮಿಳಿನಲ್ಲಿ 2002ರಲ್ಲಿ ~ಜಮಿಲಾ~ ಎಂಬ ಸಿನಿಮಾ ಆಗಿತ್ತು. 2002ರಲ್ಲಿ ತಮಿಳುನಾಡು ಸರ್ಕಾರ ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿತ್ತು. ಒಂದು ಬಾರಿ ಪ್ರಶಸ್ತಿ ದೊರಕಿದ ಕಥೆಯನ್ನು ಆಧರಿಸಿದ ಸಿನಿಮಾವನ್ನು ಹೇಗೆ ಮತ್ತೊಮ್ಮೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ~ ಎಂದು ಪ್ರಶ್ನಿಸಿದರು.
ಒಪ್ಪಂದ: `ಈ ಕೃತಿಯನ್ನು ಬೇರೆಯವರಿಗೆ ಸಿನಿಮಾ ಮಾಡಲು ಕೊಡುವುದಿಲ್ಲ ಎಂದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಸಿ) ಜತೆ ಒಪ್ಪಂದ ಮಾಡಿಕೊಂಡಿದ್ದೆ. ಈ ಒಪ್ಪಂದ 2015ರವರೆಗೆ ಜಾರಿಯಲ್ಲಿರುತ್ತದೆ. ಕೃತಿಚೌರ್ಯ ಮಾಡಿದ ಬಗ್ಗೆ ಎನ್‌ಎಫ್‌ಡಿಸಿಗೂ ಪತ್ರ ಬರೆದು ತಿಳಿಸಿದ್ದೆ. ಅವರಿಂದಲೂ ಪ್ರತಿಕ್ರಿಯೆ ಬಂದಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.
`ಚಿತ್ರದ ನಿರ್ಮಾಪಕ ಅಲ್ತಾಫ್ ಕೃತ್ಯದ ಬಗ್ಗೆ ರಾಜ್ಯ ಚಲನಚಿತ್ರ ಮಂಡಳಿಗೂ ದೂರು ಸಲ್ಲಿಸಿದ್ದೆ. ಆಗ ಅಧ್ಯಕ್ಷರಾಗಿದ್ದ ಜಯಮಾಲಾ ಸಿನಿಮಾ ನಿರ್ಮಾಣ ಮಾಡದಂತೆ ತಡೆಹಿಡಿದಿದ್ದರು. ಅಲ್ತಾಫ್ ನನ್ನ ಕಾಲಿಗೆ ಬಿದ್ದು ಕ್ಷಮಿಸಿ ಎಂದು ಬೇಡಿಕೊಂಡ. ಆದರೂ ಅನುಮತಿ ನೀಡಿರಲಿಲ್ಲ~ ಎಂದರು.
`ಕೃತಿಚೌರ್ಯ ವಿರುದ್ಧ ಮಂಗಳೂರಿನ ನ್ಯಾಯಾಲಯದ ಮೊರೆ ಹೋಗಿದ್ದೆ. ಈ ವಯಸ್ಸಿನಲ್ಲಿ ಅಲೆದಾಟ, ರಗಳೆ ಬೇಡ ಎಂದು ತೀರ್ಮಾನಿಸಿ ಮೊಕದ್ದಮೆ ಹಿಂದೆ ಪಡೆದೆ. ಆದರೆ, ನನಗೆ ನ್ಯಾಯಾಲಯದಲ್ಲಿ ಸೋಲಾಗಿದೆ ಎಂದು ಅಲ್ತಾಫ್ ತಪ್ಪು ಮಾಹಿತಿ ನೀಡುತ್ತಿದ್ದಾನೆ~ ಎಂದರು.
ಆದರೆ `ಕೃತಿಚೌರ್ಯ ಆರೋಪ ಮಾಡಿ ನ್ಯಾಯಾಲಯಕ್ಕೆ ಹೋಗುವವರೆಗೆ ನನಗೆ ಸಾರಾ ಅಬೂಬಕ್ಕರ್ ಎಂಬ ಲೇಖಕಿ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ~ ಎಂದು `ಬ್ಯಾರಿ~ ಚಿತ್ರ ನಿರ್ಮಾಪಕ ಟಿ.ಎಚ್.ಅಲ್ತಾಫ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ಬ್ಯಾನರ್‌ನಲ್ಲಿ ಕಥೆಗಾರ ಹೆಸರು ಹಾಕಿದ ಇರ್ಫಾನ್ ಚೊಕ್ಕಬೆಟ್ಟು ಅವರ ಕೃತಿ ಹಾಜರುಪಡಿಸಲು ನ್ಯಾಯಾಲಯ ಸೂಚಿಸಿತ್ತು. ಈವರೆಗೂ ಕೃತಿ ಹಾಜರುಪಡಿಸಿಲ್ಲ. ಇರ್ಫಾನ್‌ಗೆ ಕನ್ನಡದಲ್ಲಿ ಸರಿಯಾಗಿ ಬರೆಯಲು ಬರುತ್ತದಾ ಎಂಬುದನ್ನು ಮೊದಲು ನೋಡಿಕೊಳ್ಳಲಿ~ ಎಂದು ಸಾರಾ ಸಿಟ್ಟಾದರು.
ಸಾರಾ ಗೊತ್ತೇ ಇರಲಿಲ್ಲ:
~ಅವರಿಗೆ ವಯಸ್ಸಾಗಿದೆ. ಕೃತಿ ಚೌರ್ಯ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಿನಿಮಾ ವಿರುದ್ಧ ತುಂಬಾ ಅಪಪ್ರಚಾರ ಮಾಡಿದ್ದಾರೆ. ಇದೊಂದು ರೀತಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುವ ಯತ್ನ~ ಎಂದು ಆರೋಪಿಸಿದರು.
~ನಮ್ಮ ಊರಿನ ಘಟನೆ ಆಧರಿಸಿ ಬ್ಯಾರಿ ಸಿನಿಮಾ ಕಥೆ ಹೆಣೆಯಲಾಗಿದೆ. ಅಲ್ಲಿಯ ಸಮಸ್ಯೆ ನಾನೇ ನಿಂತು ಸರಿಪಡಿಸಿದ್ದೆ. ಇರ್ಫಾನ್‌ಗೆ ಘಟನೆ ವಿವರಿಸಿ ಕಥೆ ಬರೆದುಕೊಡುವಂತೆ ವಿನಂತಿಸಿದ್ದೆ. ಸಿನಿಮಾ ನೋಡಿದವರೂ ಇದು ಸಾರಾ ಅವರ ಕಥೆಯಲ್ಲ ಎಂದಿದ್ದಾರೆ. ನಾನೇಕೆ ಕೃತಿಚೌರ್ಯ ಮಾಡಲಿ~ ಎಂದು ಪ್ರಶ್ನಿಸಿದರು.
~ಬ್ಯಾರಿ ಸಮುದಾಯದಲ್ಲಿ ಬೊಳುವಾರು ಮಹಮ್ಮದ್ ಕುಂಞ, ಫಕೀರ್ ಅಹ್ಮದ್ ಕಟ್ಪಾಡಿ, ಮಹಮ್ಮದ್ ಬಡ್ಡೂರು ಅವರಂತಹ ಉತ್ತಮ ಕಥೆಗಾರರಿದ್ದಾರೆ. ಅಗತ್ಯ ಎನಿಸಿದ್ದರೆ ಅವರ ಕಾದಂಬರಿಗಳನ್ನೇ ಸಿನಿಮಾ ಮಾಡುತ್ತಿದ್ದೆ~ ಎಂದು ಮಾತು ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.