ADVERTISEMENT

ಕೃಷಿ: ಖಾಸಗಿ ಹೂಡಿಕೆಗೆ ಅವಕಾಶ

ಗುತ್ತಿಗೆ ಕೃಷಿ ಕಾನೂನಿಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST
   

ಬೆಂಗಳೂರು: ಕಾರ್ಪೊರೇಟ್‌ ಮತ್ತು ಖಾಸಗಿ ಕಂಪನಿಗಳು ಕೃಷಿಯಲ್ಲಿ ತೊಡಗಲು ಸಹಾಯಕವಾಗುವ ಸಾಮೂಹಿಕ ಮತ್ತು ಗುತ್ತಿಗೆ ಕೃಷಿ ಪದ್ಧತಿ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲುಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್‌. ಶಿವಶಂಕರರೆಡ್ಡಿ ತಿಳಿಸಿದರು.

ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಜಾರಿಯಲ್ಲಿದ್ದು, ಅದರಲ್ಲಿ ಕೆಲವು ತಿದ್ದುಪಡಿಗಳನ್ನು ತರಲಾಗುವುದು. ಗುತ್ತಿಗೆ ಒಪ್ಪಂದ ಮಾಡಿಕೊಳ್ಳುವ ಕಂಪನಿಯ ಜತೆಗೆ ರೈತರು ಸಾಮೂಹಿಕ ಕೃಷಿಯಲ್ಲಿ ತೊಡಗಬಹುದು ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಕಂಪನಿಗಳು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸಬಹುದು. ಕೃಷಿಗೆ ಅಗತ್ಯವಿರುವ ಬಂಡವಾಳ, ಕೃಷಿ ಉಪಕರಣಗಳು, ಬಿತ್ತನೆ ಬೀಜ, ರಸಗೊಬ್ಬರದಿಂದ ಹಿಡಿದು ಎಲ್ಲ ವ್ಯವಸ್ಥೆಗಳನ್ನೂ ಕಂಪನಿಗಳೇ ಮಾಡುತ್ತವೆ. ಕೊನೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯನ್ನೂ ಈ ಕಂಪನಿಗಳೂ ಮಾಡುತ್ತವೆ. ನಿಶ್ಚಿತ ಆದಾಯವೂ ರೈತರಿಗೆ ಸಿಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಕೃಷಿ ಭೂಮಿಯ ಹಕ್ಕು ಮತ್ತು ಒಡೆತನ ರೈತರದ್ದೇ ಆಗಿರುತ್ತದೆ. ಖಾಸಗಿ ಕಂಪನಿಗಳು ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ‍ಪಡೆದು ಕೃಷಿ ನಡೆಸುತ್ತವೆ. ಒಂದೆರಡು ಗ್ರಾಮಗಳ ಆಸಕ್ತ ರೈತರು ಒಂದುಗೂಡಿ ಇಂತಹ ವ್ಯವಸಾಯ ಮಾಡಲು ಇಚ್ಛೆಪಟ್ಟರೆ, ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಬಹುದು. ಯಾವುದೇ ರೈತರ ಮೇಲೂ ಒತ್ತಡ ಇಲ್ಲ. ಇಚ್ಛೆ ಇದ್ದರೆ ಪಾಲ್ಗೊಳ್ಳಬಹುದು. ಇಲ್ಲವಾದರೆ ಬಿಡಬಹುದು. ಇಸ್ರೇಲ್‌ನಲ್ಲೂ ಈ ರೀತಿಯ ಕೃಷಿಪದ್ಧತಿ ಇದೆ ಎಂದು ಶಿವಶಂಕರರೆಡ್ಡಿ ಹೇಳಿದರು.

ಕೃಷಿಯು ಕೈಗಾರಿಕೆಯಾಗಿ ರೂಪಾಂತರಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗುತ್ತದೆ. ಇದಕ್ಕಾಗಿ ಒಂದು ನೀತಿಯನ್ನೂ ರೂಪಿಸಲಾಗುವುದು ಎಂದೂ ಅವರು ಹೇಳಿದರು.

* ಸಿರಿ ಧಾನ್ಯ ಉತ್ತೇಜನಕ್ಕಾಗಿ ‘ರೈತಸಿರಿ’ ಕಾರ್ಯಕ್ರಮದಡಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ₹ 10 ಸಾವಿರ ಅನುದಾನ.

* ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ಸಾವಯವ ಉತ್ಪನ್ನಗಳ ಪ್ಯಾಕಿಂಗ್‌ ಮತ್ತು ಬ್ರ್ಯಾಂಡಿಂಗ್‌ ಘಟಕಗಳಿಗೆ ಪ್ರೋತ್ಸಾಹ ಧನ.

* ಬೆಂಗಳೂರಿನಲ್ಲಿ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಫಾರ್‌ ಆರ್ಗ್ಯಾನಿಕ್ಸ್‌ ಅಂಡ್‌ ಮಿಲೆಟ್ಸ್‌’(ಸಾವಯವ, ಸಿರಿಧಾನ್ಯಗಳ ಹಬ್‌) ಸ್ಥಾಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.