ADVERTISEMENT

ಕೃಷಿ ವಿಜ್ಞಾನಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: `ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್)ಯ 97 ಐಸಿಎಆರ್ ಸಂಸ್ಥೆಗಳಲ್ಲಿ ಆರು ಸಾವಿರ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸಂಸ್ಥೆಗಳಲ್ಲಿ ಪ್ರಸ್ತುತ ಖಾಲಿ ಇರುವ ಶೇ 25ರಷ್ಟು ಹುದ್ದೆಗಳನ್ನು ಇನ್ನೆರಡು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು~ ಎಂದು ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ. ಗುರುಬಚನ್ ಸಿಂಗ್ ಭರವಸೆ ನೀಡಿದರು.

ಬೆಂಗಳೂರು ಕೃಷಿ ವಿವಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಂಡ ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಎದುರಾಗಿಸುವ ಸವಾಲುಗಳು, ಭವಿಷ್ಯದ ಯೋಜನೆಗಳ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮುಕ್ತವಾಗಿ ಮಾತನಾಡಿದರು.

`500 ವಿಜ್ಞಾನಿಗಳ ನೇರ ನೇಮಕಾತಿ ಸೇರಿದಂತೆ ಮಂಡಳಿ ಪ್ರತಿವರ್ಷ 800 ವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 3 ವರ್ಷಗಳಿಂದ ಅಮೆರಿಕ, ಯುರೋಪ್, ಆಸ್ಟ್ರೇಲಿಯಾದ ವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಬಾರಿ ವಿದೇಶದಿಂದ 7 ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚಿಗೆ ವಿದೇಶಿಯರು ಸಹ ಭಾರತದ ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಕೊಡುಗೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ~ ಎಂದು ಅವರು ತಿಳಿಸಿದರು.

`ಜೈವಿಕ ತಂತ್ರಜ್ಞಾನ, ಸಸ್ಯ ಶರೀರ ವಿಜ್ಞಾನ, ಮೀನುಗಾರಿಕಾ ವಿಜ್ಞಾನ ಕ್ಷೇತ್ರದಿಂದ ಅತ್ಯುತ್ತಮ ಗುಣಮಟ್ಟದ ಅಭ್ಯರ್ಥಿಗಳು ಬರುತ್ತಿದ್ದಾರೆ. ಆದರೆ, ಕೃಷಿ ವಿಸ್ತರಣಾ ಕ್ಷೇತ್ರ, ಪಶು ವಿಜ್ಞಾನ ವಿಭಾಗಗಳಲ್ಲಿ ನಿರೀಕ್ಷಿತ ಮಟ್ಟದ ಅಭ್ಯರ್ಥಿಗಳು ದೊರಕುತ್ತಿಲ್ಲ.

ಕೃಷಿ ವಿಸ್ತರಣಾ ಕ್ಷೇತ್ರಕ್ಕೆ ಭಾರಿ ಬೇಡಿಕೆ ಇದ್ದು, ಗುಣಮಟ್ಟದ ವಿಜ್ಞಾನಿಗಳ ಕೊರತೆ ಇರುವುದರಿಂದ ಈ ಕ್ಷೇತ್ರದಲ್ಲಿ ಸಂಶೋಧನಾ ಚಟುವಟಿಕೆಗೆ  ಹಿನ್ನಡೆಯುಂಟಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿ ಗಮನ ಸೆಳೆಯಲಾಗಿದೆ. ಈ ವಿಭಾಗಗಳಲ್ಲಿ ಗುಣಮಟ್ಟ ಹೆಚ್ಚಳಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೃಷಿ ವಿವಿಗಳಿಗೆ ಸಲಹೆ ನೀಡಲಾಗಿದೆ~ ಎಂದರು.

`ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ಪಶುಸಂಗೋಪನೆ ಸಂಶೋಧನಾ ಸಂಸ್ಥೆ, ಕೊಯಮತ್ತೂರಿನಲ್ಲಿರುವ ತಮಿಳುನಾಡು ಕೃಷಿ ವಿವಿ (ಟಿಎನ್‌ಯುಎಸ್), ಮುಂಬೈನ ಕೇಂದ್ರೀಯ ಮೀನುಗಾರಿಕಾ ಶಿಕ್ಷಣ ಸಂಸ್ಥೆ, ಬೆಂಗಳೂರು ಕೃಷಿ ವಿವಿ ಹಾಗೂ ಧಾರವಾಡದ ಕೃಷಿ ವಿವಿಗಳಿಂದ ಉತ್ತಮ ಅಭ್ಯರ್ಥಿಗಳು ಹೊರಬರುತ್ತಿದ್ದಾರೆ. ಉಳಿದ ವಿವಿಗಳು ಗುಣಮಟ್ಟ ಹೆಚ್ಚಿಸಲು ತುರ್ತು ಆದ್ಯತೆ ನೀಡಬೇಕು~ ಎಂದು ಹೇಳಿದರು.

ಕೃಷಿ ಸವಾಲುಗಳು:
`ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಕ್ಲಿಷ್ಟವಾದವು. ಇವುಗಳನ್ನು ಪರಿಹರಿಸಲು ಸ್ಪರ್ಧಾತ್ಮಕ ಮನೋಭಾವದ ವಿಜ್ಞಾನಿಗಳನ್ನು ಆಯ್ಕೆ ಮಾಡಬೇಕಿದೆ.  ಈ ನಿಟ್ಟಿನಲ್ಲಿ ಮಂಡಳಿ ನಡೆಸುವ ಪರೀಕ್ಷೆ, ಬಡ್ತಿ ಹಾಗೂ ನೇಮಕಾತಿಗಳಲ್ಲಿ ಅರ್ಹತೆ ಹಾಗೂ ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ~ ಎಂದು ಅವರು ತಿಳಿಸಿದರು.

ಭವಿಷ್ಯದ ಯೋಜನೆಗಳು:
`ಐಸಿಎಆರ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕೌಶಲವನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಕೌಶಲದಿಂದ ಕೂಡಿರುವ ಮಾನವಶಕ್ತಿಯ ನೇಮಕಕ್ಕೆ ಕ್ರಮ ಕೈಗೊಳ್ಳುವುದು.

ADVERTISEMENT

ಪರೀಕ್ಷಾ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳುವುದು, ಕೃಷಿ ಸಂಶೋಧನೆಯ ವಿಶ್ಲೇಷಣಾ ಹಾಗೂ ಯೋಜನಾ ಘಟಕಗಳನ್ನು ತೆರೆಯುವುದು, ಮಂಡಳಿಗೆ ಅಗತ್ಯ ಇರುವ ಮೂಲ ಸೌಕರ್ಯವನ್ನು ಒದಗಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.