ಬೆಂಗಳೂರು: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಅಬ್ಬರ ಮಂಗಳವಾರ ಕಡಿಮೆಯಾಗಿದೆ. ಆದರೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ.ಚಿಕ್ಕೋಡಿ ತಾಲ್ಲೂಕಿನ ದೂಧ್‌ಗಂಗಾ ನದಿ ನೀರಿನ ಹರಿವಿನಲ್ಲಿ ಕೊಂಚ ಇಳಿಕೆಯಾಗಿದೆಯಾದರೂ ಕೃಷ್ಣಾ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿಯೇ ಇದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ ಮಂಗಳವಾರ1.86 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಮಹಾರಾಷ್ಟ್ರದ ಕೋಯ್ನಾ ಅಣೆಕಟ್ಟಿನಿಂದ ಮಂಗಳವಾರ 18,635 ಕ್ಯೂಸೆಕ್ ಹೊರಬಿಡಲಾಗಿದೆ.
ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗದಲ್ಲಿ ಮುಳುಗಡೆಯಾದ 15ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜ್‌ಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಕೃಷ್ಣಾ ಮತ್ತು ಉಪನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳ ಉಂಟಾಗಿ ಅಕ್ಕ–ಪಕ್ಕದ ಜಮೀನಿಗೆ ನುಗ್ಗಿ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೀಡಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮಳೆ ಕ್ಷೀಣಿಸಿದೆ. ಇದಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಕಡಿಮೆಯಾಗಿದೆ.
ಶವ ಪತ್ತೆ: ಹರಿಗೋಲು ನಡೆಸುವಾಗ ನಾಪತ್ತೆಯಾಗಿದ್ದ ರಾಯಚೂರು ಜಿಲ್ಲೆ ಕೊರ್ತಕುಂದಾ ಗ್ರಾಮದ ತಿಮ್ಮಪ್ಪ (45) ಅವರ ಶವ ಆಂಧ್ರಪ್ರದೇಶದ ಆತ್ಮಾಕೂರು ಬಳಿಯ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ.
ಜೂರಾಲ ಅಣೆಕಟ್ಟೆಯ ನಡುಗೆಡ್ಡೆಯಾದ ಖಮ್ಮಾಮ್ ಪಾಡುವಿನಲ್ಲಿ ಸೋಮವಾರ ಕಾಣಿಸಿದ್ದ ಶವ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಆತ್ಮಾಕೂರಿನ ಕಡೆಗೆ ಹೋಗಿತ್ತು. ಆತ್ಮಾಕೂರು ಠಾಣೆ ಪೊಲೀಸರು ಅಪರಿಚಿತ ಶವವೆಂದು ಮಂಗಳವಾರ ಮಣ್ಣು ಮಾಡಿದ್ದರು.
ಈ ಠಾಣೆಗೆ ತೆರೆಳಿದ್ದ ತಿಮ್ಮಪ್ಪ ಅವರ ಪತ್ನಿ ಲಕ್ಷ್ಮಿ ಮತ್ತು ಕುಟುಂಬದವರು ಪೊಲೀಸರು ಮಣ್ಣು ಮಾಡಿರುವ ಶವದ ಭಾವಚಿತ್ರ ಮತ್ತು ತಮ್ಮ ಬಳಿ ಇದ್ದ ತಿಮ್ಮಪ್ಪ ಭಾವಚಿತ್ರವನ್ನು ಹೋಲಿಸಿ ಶವ ತಿಮ್ಮಪ್ಪನವರದ್ದೇ ಎಂದು ಗುರುತಿಸಿದರು.
ಮತ್ತೆ ಸೇತುವೆ ಮುಳಗಡೆ: ನಾರಾಯಣಪುರದ ಬಸವಸಾಗರ ಅಣೆಕಟ್ಟೆಯಿಂದ ಮಂಗಳವಾರ 2.20 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮತ್ತೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಕಳೆದ ವಾರ ಕೂಡ ಈ ಸೇತುವೆ ಮುಳುಗಡೆಯಾಗಿತ್ತು.
‘ಕರಕಲಗಡ್ಡಿ ನಡುಗಡ್ಡೆಯಲ್ಲಿ ದಿನತುಂಬಿದ ಗರ್ಭಣಿ ಇದ್ದು, ಅವರನ್ನು ಲಿಂಗಸುಗೂರಿನ ಆಸ್ಪತ್ರೆಗೆ ಕರೆತರಬೇಕು. ಆದರೆ, ತಾಲ್ಲೂಕು ಆಡಳಿತ ದೋಣಿ ವ್ಯವಸ್ಥೆ ಮಾಡಿಲ್ಲ, ವೈದ್ಯರನ್ನೂ ಕಳುಹಿಸಿಲ್ಲ. ನದಿಯಲ್ಲಿ ತೆಪ್ಪ ಚಲಾಯಿಸಲು ಸ್ಥಳೀಯರಿಗೆ ಅನುಮತಿ ನೀಡುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.