ADVERTISEMENT

ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST
ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ
ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ   

ಆಲಮಟ್ಟಿ: ಅತ್ತ ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆಯೇ ಇತ್ತ ಕಲ್ಲು ಗಣಿಗಾರಿಕೆ ಆರಂಭವಾಗಿದೆ. ಕೃಷ್ಣಾ ನದಿ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಕೃಷ್ಣಾ ನದಿ ದಂಡೆಯ ಮೇಲೆ ಈಗ ಬುಲ್ಡೋಜರ್‌ನಿಂದ ಭಾರಿ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೃಷ್ಣಾ ನದಿ ದಾಟಲು ನಿರ್ಮಿಸಿರುವ ಪಾರ್ವತಿ ಕಟ್ಟಾ ರೇಲ್ವೆ ಸೇತುವೆ ಮತ್ತು ರಸ್ತೆ ಸೇತುವೆ ಪಕ್ಕದಲ್ಲಿ ಈ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೆ,  ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಕಲ್ಲು ಗಣಿಗಾರಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂದು ಜನತೆ ಆರೋಪಿಸುತ್ತಿದ್ದಾರೆ.

ಮುಂಜಾನೆಯಿಂದಲೇ ಪ್ರಾರಂಭವಾಗುವ ಈ ಕಲ್ಲು ಗಣಿಗಾರಿಕೆ ಸಂಜೆಯವರೆಗೂ ಅವ್ಯಾಹತವಾಗಿ ಮುಂದುವರಿದಿರುತ್ತದೆ. ಈ ಮೊದಲು ಕೇವಲ ಕೈಯಿಂದ ಕಲ್ಲುಗಳನ್ನು ಒಡೆದು ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು.
 
ಆದರೆ, ಇತ್ತೀಚೆಗೆ ಅಲ್ಲಿ ಸಮೀಪದಲ್ಲಿಯೇ ಸೇತುವೆ ನಿರ್ಮಿಸುತ್ತಿರುವ ಗುತ್ತಿಗೆದಾರರೊಬ್ಬರು ತಮ್ಮ ಸೇತುವೆಗೆ ಅಗತ್ಯವಾಗಿರುವ ಕಲ್ಲುಗಳನ್ನು ನದಿ ದಂಡೆಯ ಮೇಲೆ ಅದರಲ್ಲಿಯೂ ಸೇತುವೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ.

ಬುಲ್ಡೋಜರ್, ಇತರ ಯಂತ್ರ (ಸ್ಟನರ್)ಗಳ ನೆರವಿನಿಂದ ರಾಜಾರೋಷವಾಗಿ ದಂಡೆಯ ಮೇಲಿನ ಕಲ್ಲುಗಳನ್ನು ಒಡೆಯುತ್ತಿದ್ದಾರೆ. ಇದರಿಂದ ಕೃಷ್ಣಾ ನದಿ ದಂಡೆ ಸುತ್ತಲೂ ದೊಡ್ಡ ದೊಡ್ಡ ತೆಗ್ಗುಗಳು ನಿರ್ಮಾಣಗೊಂಡಿವೆ.

ಈ ಮೊದಲು ಸ್ಥಳೀಯ ಕೆಲ ಜನರು ತಮ್ಮ ಹೊಟ್ಟೆಪಾಡಿಗಾಗಿ ಕೈಯಿಂದಲೇ ಕಲ್ಲುಗಳನ್ನು ಒಡೆದು ಸ್ವಲ್ಪ ಪ್ರಮಾಣದಲ್ಲಿ ಸಾಗಿಸುತ್ತಿದ್ದರು.  ಯಾವಾಗ ಬುಲ್ಡೋಜರ್ ಅಲ್ಲಿ ಕಾಲಿಟ್ಟಿತೋ, ಆಗ ಕೃಷ್ಣಾ ನದಿ ದಂಡೆ ಪೂರ್ತಿ ಬರಿದಾಗುತ್ತಾ ಸಾಗುತ್ತಿದೆ. ನದಿಯಲ್ಲಿ ನೀರು ಕಡಿಮೆಯಾದ ತಕ್ಷಣ ಈ ಕಾಯಕ ಹೆಚ್ಚುತ್ತದೆ. ಸುಮಾರು 6 ತಿಂಗಳು ನೀರಿನಿಂದ ನೆನೆದ ಈ ಭೂಮಿಯಲ್ಲಿ ಕಲ್ಲು ತೆಗೆಯುವುದು ಸುಲಭ. ಹೀಗಾಗಿ ವ್ಯಾಪಕವಾಗಿ ಕಲ್ಲುಗಳನ್ನು ತೆಗೆಯಲಾಗುತ್ತಿದೆ.

ಗಣಿಗಾರಿಕೆಯ ಸಮೀಪದಲ್ಲಿಯೇ ಆಲಮಟ್ಟಿ ಆರ್.ಎಸ್. ಗ್ರಾಮವಿದೆ. ಈಗಾಗಲೇ ಅಲ್ಲಿ ಸವಳು, ಜವುಳಿನ ಸಮಸ್ಯೆ ವ್ಯಾಪಕವಾಗಿದೆ. ಪ್ರತಿ ಮನೆಯ ಅಡಿಪಾಯ ತೋಡಿದಾಗಲೂ ನೀರು ಬರುತ್ತದೆ. ಗಣಿಗಾರಿಕೆ ಹೀಗೆಯೇ  ಮುಂದುವರಿದರೆ ನೀರು ಇನ್ನಷ್ಟು ಮುಂದೆ ಬಂದು ಅಲ್ಲಿ ಇನ್ನಷ್ಟು ಸುವಳು-ಜವುಳು ಹಿಡಿಯುವ ಸಾಧ್ಯತೆ ಇದೆ.

ಅಧಿಕಾರಿಗಳ  ಸಹಕಾರ: ಇದನ್ನು ಪ್ರಶ್ನಿಸಬೇಕಾದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನತೆ ಆರೋಪಿಸುತ್ತಾರೆ. ಸಣ್ಣಪುಟ್ಟ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಈ ಅಧಿಕಾರಿಗಳು ಮುಂದೆ ಬರುತ್ತಾರೆ. ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಹೋದರೂ ಅದನ್ನು ದಾಖಲಿಸುವುದಿಲ್ಲ.
 
ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಿಯಮಗಳ ಪ್ರಕಾರ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ದೂರು ಸಲ್ಲಿಸಬೇಕು. ಆಗ ಮಾತ್ರ ಅವರ ವಿರುದ್ಧ ಪ್ರಕರಣ ದಾಖಲಿಸಲು ಬರುತ್ತದೆ ಎನ್ನುತ್ತಾರೆ ಪಿ.ಎಸ್.ಐ. ಎಸ್.ವೈ. ಮರಡಿ.

 ಕೃಷ್ಣಾ  ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರೇ, ಆ ಗುತ್ತಿಗೆದಾರರು ಸೇತುವೆ ನಿರ್ಮಾಣಕ್ಕೆ ಕಲ್ಲು ಎಲ್ಲಿಂದ ತರಬೇಕು. ಹೀಗಾಗಿ ಇಲ್ಲಿಂದ ಕಲ್ಲುಗಳನ್ನು ಒಯ್ಯುತ್ತಿದ್ದಾರೆ ಎನ್ನುತ್ತಾರೆ. ಅವರಿಗೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆಯೇ  ಎಂಬ ಪ್ರಶ್ನೆಗೆ ಹಿರಿಯ ಅಧಿಕಾರಿಗಳು  ಹಾರಿಕೆಯ ಉತ್ತರ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.