ADVERTISEMENT

ಕೃಷ್ಣಾ: ನಾರಿಮನ್‌ ಜತೆ ಇಂದು ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 20:00 IST
Last Updated 8 ಜನವರಿ 2014, 20:00 IST

ಬೆಂಗಳೂರು:  ಕೃಷ್ಣಾ ಜಲವಿವಾದಕ್ಕೆ ಸಂಬಂಧ ಪಟ್ಟಂತೆ ಹಿರಿಯ ವಕೀಲ ಎಫ್‌.ಎಸ್‌.ನಾರಿಮನ್‌ ಅವರೊಂದಿಗೆ ಗುರುವಾರ ಚರ್ಚೆ ನಡೆಸಿದ ನಂತರ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೃಷ್ಣಾ ನ್ಯಾಯಮಂಡಳಿಯ ಐತೀರ್ಪು ಬಂದ ನಂತರ ರಾಜ್ಯ ಸರ್ಕಾರ ಕೋರಿದ್ದ 12 ಸ್ಪಷ್ಟನೆಗಳಿಗೆ ನವೆಂಬರ್‌ 29ರಂದು ನ್ಯಾಯಮಂಡಳಿ ವಿವರಣೆ ನೀಡಿತ್ತು. ಇದರ ಸಾಧಕ – ಬಾಧಕಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನ ಮಂಡಲದ ಉಭಯ ಸದನಗಳ ನಾಯಕರು, ತಾಂತ್ರಿಕ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದರು.

ಇದಾದ ನಂತರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರಿಮನ್‌ ಅವರು ನೀಡುವ ಸಲಹೆ ಆಧರಿಸಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಲಿದೆ. ಈ ವಿಚಾ ರದಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದರು.ನ್ಯಾಯಮಂಡಳಿ ನೀಡಿರುವ ತೀರ್ಪು ರಾಜ್ಯಕ್ಕೆ ಅನುಕೂಲಕರವಾಗಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಬೇಕು ಎಂದು ಪ್ರತಿಪಕ್ಷಗಳ ನಾಯಕರು ಸಲಹೆ ಮಾಡಿದ್ದಾರೆ ಎಂದು ತಿಳಿಸಿದರು.

ಗುರುವಾರ 4ಗಂಟೆಗೆ ನವದೆಹಲಿಯಲ್ಲಿ ನಾರಿ ಮನ್‌ ಅವ ರೊಂದಿಗೆ ಚರ್ಚೆ ನಡೆಸಲಾಗುವುದು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ, ಯೋಜನಾ ಸಚಿವ ಎಸ್‌.ಆರ್‌. ಪಾಟೀಲ, ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.