ADVERTISEMENT

ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ  ವಿಸ್ತೃತ ಯೋಜನೆಗೆ 17,207 ಕೋಟಿ ರೂಪಾಯಿ ವೆಚ್ಚ ಮಾಡಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆ ಮೂಲಕ ಏಳು ವರ್ಷಗಳಲ್ಲಿ 130.5 ಟಿಎಂಸಿ ಅಡಿ ನೀರು ಬಳಸಿಕೊಂಡು ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಬಾಗಲಕೋಟೆ, ವಿಜಾಪುರ, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 5,30,475 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶವನ್ನು ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಹೊಂದಿದೆ. ಪರಿಹಾರ ಮತ್ತು ಪುನರ್ವಸತಿ ಹಾಗೂ ಮೊದಲನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸಚಿವರಾದ ಡಾ.ವಿ.ಎಸ್.ಆಚಾರ್ಯ ಮತ್ತು ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಈ ಯೋಜನೆಯಿಂದ 20 ಹಳ್ಳಿಗಳು ಮುಳುಗಡೆಯಾಗಲಿದ್ದು, 76,000 ಎಕರೆ ಭೂಮಿ ಜಲಾವೃತವಾಗಲಿದೆ. 20 ಹಳ್ಳಿಗಳ ಜನರನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕಿದೆ. ಪ್ರಸಕ್ತ ಆರ್ಥಿಕ ವರ್ಷದ ಚಾಲ್ತಿ ದರಗಳ ಆಧಾರದಲ್ಲಿ ಈ ಯೋಜನೆಗೆ 17,207 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ವಿವಿಧ ಮೂಲಗಳಿಂದ ಆರ್ಥಿಕ ನೆರವು ಪಡೆದು ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ, ಮಲ್ಲಾಬಾದ್, ಕೊಪ್ಪಳ, ಹೆರಕಲ್ ಏತ ನೀರಾವರಿ ಯೋಜನೆಗಳು, ಇಂಡಿ ಏತ ನೀರಾವರಿ ವಿಸ್ತೃತ ಯೋಜನೆ, ರಾಮಪುರ ಏತ ನೀರಾವರಿ ವಿಸ್ತೃತ ಯೋಜನೆ, ನಾರಾಯಣಪುರ ಬಲದಂಡೆ ಕಾಲುವೆ ಮತ್ತು ಭೀಮಾ ತಿರುವು ಯೋಜನೆಗಳು ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಜಮೀನು, ಮನೆಮಠ ಕಳೆದುಕೊಂಡವರಿಗೆ ನೀರಾವರಿ ಸೌಕರ್ಯ ಒದಗಿಸುವ ಪ್ರಯತ್ನವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಯ `ಡಿಪಿಆರ್~ಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿರುವುದರಿಂದ ಕೃಷ್ಣಾ ಜಲ ನ್ಯಾಯಮಂಡಳಿ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮತಿ ಪಡೆಯಲು ಅವಕಾಶ ದೊರೆಯುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಪಠ್ಯಕ್ರಮ ಬದಲಾವಣೆಗೆ ಒಪ್ಪಿಗೆ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಶಿಫಾರಸಿನಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಐದು ಮತ್ತು ಎಂಟನೇ ತರಗತಿಗೆ ರಾಷ್ಟ್ರೀಯ ಪಠ್ಯಕ್ರಮ ಅಳವಡಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಹೊಸ ಪಠ್ಯಕ್ರಮ ಜಾರಿಯಾಗಲಿದ್ದು, ಕರ್ನಾಟಕ ಕೂಡ ಆ ದಿಸೆಯಲ್ಲಿ ಕ್ರಮ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದರು.

ಹೊಸ ಪಠ್ಯಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಸದ್ಯ 15 ಕೋಟಿ ರೂಪಾಯಿ ಮೌಲ್ಯದ ಪಠ್ಯಪುಸ್ತಕಗಳು ದಾಸ್ತಾನಿದ್ದು, ಹೊಸ ಪಠ್ಯಕ್ರಮ ಜಾರಿಗೂ ಮುನ್ನ ಅವುಗಳು ಬಳಕೆಯಾಗಲಿವೆ ಎಂದು ಹೇಳಿದರು.

ರಾಜ್ಯದಲ್ಲಿ ಎರಡು ಕಡೆ ಬಿಎಸ್‌ಸಿ ನರ್ಸಿಂಗ್ ಪದವಿ ಕಾಲೇಜುಗಳು, ಏಳು ವಿಶೇಷ ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳು ಮತ್ತು 56 ಕಡೆ ಅರೆ ವೈದ್ಯಕೀಯ ತರಗತಿಗಳ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ದಾಖಲೆ ತಯಾರಿ: ನಾಗರಿಕ ಸನ್ನದು ಪ್ರಕಾರ 11 ವಿವಿಧ ಇಲಾಖೆಗಳ 152 ಸೇವೆಗಳ ಖಾತರಿಗೆ ಸಂಬಂಧಿಸಿದ ವಾರ್ಷಿಕ `ಫಲಿತಾಂಶ ಮೌಲ್ಯಮಾಪನ ದಾಖಲೆ~ (ಆರ್‌ಎಫ್‌ಡಿ) ಸಿದ್ಧಪಡಿಸುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ. ಈ ಪ್ರಕಾರ ದಾಖಲೆಯೊಂದು ಸಿದ್ಧವಾಗಲಿದ್ದು, ಅದರ ಆಧಾರದಲ್ಲಿ ಸೇವಾ ಖಾತರಿ ಬಗ್ಗೆ ಮೌಲ್ಯಮಾಪನ ನಡೆಸಲಾಗುತ್ತದೆ.

ಕೇಂದ್ರ ಸರ್ಕಾರದ ನೀತಿಯ ಪ್ರಕಾರ ಒಂದು ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶಕ್ಕೆ ನೀರು ಒದಗಿಸುವ ನೀರಾವರಿ ಯೋಜನೆಗಳನ್ನು `ರಾಷ್ಟ್ರೀಯ ಯೋಜನೆ~ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಯೋಜನೆುನ್ನೂ ಕೇಂದ್ರ ಸರ್ಕಾರದ `ರಾಷ್ಟ್ರೀಯ ಯೋಜನೆ~ಗಳ ವ್ಯಾಪ್ತಿಯಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು. ರಾಷ್ಟ್ರೀಯ ಯೋಜನೆಯ ವ್ಯಾಪ್ತಿಯಲ್ಲಿ ಬಂದರೆ ಕೇಂದ್ರ ಸರ್ಕಾರವೂ ಹಣಕಾಸಿನ ನೆರವು ಒದಗಿಸುತ್ತದೆ ಎಂದರು.

ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಅದಕ್ಕೆ ಅಗತ್ಯವಿರುವ ಉಪನಗರ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಲು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ಒಪ್ಪಿಕೊಂಡಿದೆ.
ನಬಾರ್ಡ್‌ನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅನುದಾನವನ್ನೂ ಬಳಸಿಕೊಳ್ಳಲು ಯೋಚಿಸಲಾಗಿದೆ. ಯೋಜನೆಯ ಅವಧಿಯಲ್ಲಿ ರಾಜ್ಯ ಬಜೆಟ್‌ನಲ್ಲಿ ಪ್ರತಿ ವರ್ಷವೂ ಹಣ ಒದಗಿಸಲಾಗುವುದು, ಹೊರಗಿನ ಸಂಪನ್ಮೂಲಗಳನ್ನೂ ಬಳಸಿಕೊಳ್ಳುವ ಪ್ರಸ್ತಾವವಿದೆ ಎಂದು ವಿವರಿಸಿದರು.

ಹೊಸ ನೀತಿ: ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಹಾರ ಮತ್ತು ಪುನರ್ವಸತಿಯ ಹೊಸ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.

ನೀತಿ ರೂಪಿಸುವ ಸಂಬಂಧ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮತ್ತು ಬೆಂಗಳೂರಿನ ಏಷ್ಯಾ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಸಮಾಜ ವಿಜ್ಞಾನಿಗಳು ಮತ್ತು ಆರ್ಥಿಕ ತಜ್ಞರು ಒಟ್ಟಾಗಿ ಈ ನೀತಿಯನ್ನು ರೂಪಿಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವವರ ಜೀವನಮಟ್ಟ ಸುಧಾರಣೆಗೆ ಆದ್ಯತೆ ನೀಡುವುದು ಹೊಸ ನೀತಿಯ ಪ್ರಮುಖ ಉದ್ದೇಶ. ಮಹಾರಾಷ್ಟ್ರದಲ್ಲಿ ಈಗಾಗಲೇ ಜಾರಿಯಲ್ಲಿರುವ `ಪರಿಹಾರ ಮತ್ತು ಪುನರ್ವಸತಿ ನೀತಿ~, ಕೇಂದ್ರ ಸರ್ಕಾರ ರೂಪಿಸಿರುವ ಭೂಸ್ವಾಧೀನ ಮಸೂದೆ, ವಿಶ್ವ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಆಧರಿಸಿ ಹೊಸ ನೀತಿ ರೂಪಿಸುವ ಉದ್ದೇಶವಿದೆ. ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಈ ನೀತಿಯನ್ನು ಶಾಸನಸಭೆಯ ಮುಂದಿಡಲಾಗುವುದು ಎಂದು ತಿಳಿಸಿದರು.

ಸುವರ್ಣ ಸೌಧಕ್ಕೆ ರೂ 60 ಕೋಟಿ: ಬೆಳಗಾವಿಯ ಸುವರ್ಣ ಸೌಧಕ್ಕೆ ವಿದ್ಯುತ್ ಸಂಪರ್ಕ ಒದಗಿಸುವುದು, ಧ್ವನಿ ನಿಯಂತ್ರಣ, ದೂರವಾಣಿ ಸಂಪರ್ಕ ಕಲ್ಪಿಸುವುದು ಮತ್ತಿತರ ಕಾಮಗಾರಿಗಳಿಗಾಗಿ 60 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾವಕ್ಕೂ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಐದು ಪ್ರಾದೇಶಿಕ ಆಹಾರ ವಲಯಗಳಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಅಂಗನವಾಡಿಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವ ಯೋಜನೆಗೂ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯ (ಕೆಶಿಪ್) ಮೊದನೇ ಹಂತ ಎರಡನೇ ಘಟ್ಟದಲ್ಲಿ ವಿವಿಧ ಮೂಲಗಳ ಆರ್ಥಿಕ ನೆರವಿನಿಂದ 831 ಕಿ.ಮೀ. ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಒಪ್ಪಿಗೆ ದೊರೆತಿದೆ. ಈಗಾಗಲೇ ಯೋಜನೆಗೆ ಒಪ್ಪಿಗೆ ದೊರೆತಿತ್ತು. ವಿಶ್ವಬ್ಯಾಂಕ್ ಸಾಲ ಮಂಜೂರಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅದನ್ನು ಸಂಪುಟ ಸಭೆಯ ಮುಂದಿಟ್ಟು, ಮಂಗಳವಾರ ಒಪ್ಪಿಗೆ ಪಡೆಯಲಾಯಿತು.

ಸಂಪುಟ ಸಭೆಯ ಇತರ ತೀರ್ಮಾನಗಳು
ವಿಶ್ವ ಹೂಡಿಕೆದಾರರ ಸಮ್ಮೇಳನ ಸಿದ್ಧತೆಗೆ ರೂ 50 ಕೋಟಿ ಬಿಡುಗಡೆಗೆ ಒಪ್ಪಿಗೆ

ಏಳು ಜಿಲ್ಲೆಗಳಲ್ಲಿ ರೂ 438.71 ಕೋಟಿ ವೆಚ್ಚದಲ್ಲಿ 12 ಸಮೂಹ ಕುಡಿಯುವ ನೀರಿನ ಯೋಜನೆ

ರಸ್ತೆ ಬದಿ ವ್ಯಾಪಾರಿಗಳ ಹಿತರಕ್ಷಣೆಗೆ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿ ವರದಿ ಸ್ವೀಕಾರ

ದೇವದುರ್ಗಕ್ಕೆ ಕುಡಿಯುವ ನೀರಿಗೆ ರೂ 46 ಕೋಟಿ

ಅರಸೀಕೆರೆಗೆ ಒಳಚರಂಡಿ ಸೌಲಭ್ಯ ಕಲ್ಪಿಸಲು ರೂ 64 ಕೋಟಿ

ಕೊಳ್ಳೇಗಾಲ ಪಟ್ಟಣಕ್ಕೆ ಒಳಚರಂಡಿ ಸೌಲಭ್ಯ ಕಲ್ಪಿಸಲು ರೂ 72 ಕೋಟಿ

ಆನೇಕಲ್ ಪಟ್ಟಣಕ್ಕೆ ಒಳಚರಂಡಿ ಸೌಲಭ್ಯ ಕಲ್ಪಿಸಲು ರೂ 67 ಕೋಟಿ

ಮೈಸೂರಿನ ಚಾಮರಾಜ ಅಣೆಕಟ್ಟೆ ಮತ್ತು ಕಾಲುವೆಗಳ ಅಭಿವೃದ್ಧಿಗೆ ರೂ 132 ಕೋಟಿ

ಮಂಗಳೂರಿನ ಬೋಳೂರು-ತಣ್ಣೀರುಬಾವಿ ನಡುವೆ ಗುರುಪುರ ನದಿಗೆ ರೂ 12 ಕೋಟಿ ವೆಚ್ಚದಲ್ಲಿ ತೂಗುಸೇತುವೆ

ಮಂಗಳೂರಿನಲ್ಲಿ ಜನವರಿ 12ರಿಂದ 16ರವರೆಗೆ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ರೂ 10 ಕೋಟಿ

ಕರ್ನಾಟಕ ರಾಜ್ಯ ಸಾರಿಗೆ ಮತ್ತು ವಾಣಿಜ್ಯ ವಾಹನಗಳ ಪರಿಹಾರ ಯೋಜನೆಗೆ ಒಪ್ಪಿಗೆ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಆಧುನಿಕ ಕೃಷಿ ಮಾರುಕಟ್ಟೆ ನಿರ್ಮಾಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT