ADVERTISEMENT

ಕೃಷ್ಣ ಬಂಧುಗಳಿಂದ ಕೆರೆ ಒತ್ತುವರಿ ಆರೋಪ

ದಾಖಲೆ ಬಿಡುಗಡೆ ಮಾಡಿದ ಎಸ್.ಆರ್.ಹಿರೇಮಠ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಧಾರವಾಡ: `ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿ ವ್ಯಾಪ್ತಿಯಲ್ಲಿರುವ ಭೈರಸಂದ್ರದ 12.21 ಎಕರೆ ಪ್ರದೇಶದ ಕೆಳಗಿನ ಕೆರೆಯ ಪೈಕಿ 5.32 ಎಕರೆ ಪ್ರದೇಶವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಕ್ಕನ ಮಗ ರಾಜಾ ಬಾಗಮನೆ ಹಾಗೂ ಅಳಿಯ ಸಿದ್ಧಾರ್ಥ ಅತಿಕ್ರಮಣ ಮಾಡಿಕೊಂಡಿದ್ದಾರೆ' ಎಂದು ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಯ ಸಂರಕ್ಷಣಾ ಸಮಿತಿಯ (ಎನ್‌ಸಿಪಿಎನ್‌ಆರ್) ಮುಖಂಡ ಎಸ್.ಆರ್. ಹಿರೇಮಠ ಆರೋಪಿಸಿದರು.

`ಸರ್ವೇ ನಂ 112ರಲ್ಲಿ ಬರುವ ಈ ಕೆರೆ ಒತ್ತುವರಿಯಾದ ಬಗ್ಗೆ `ಸರ್ಕಾರಿ ಭೂಮಿ ಸಂರಕ್ಷಣಾ ಕಾರ್ಯಪಡೆ' ಅಧ್ಯಕ್ಷರಾಗಿದ್ದ ವಿ.ಬಾಲಸುಬ್ರಮಣಿಯನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಭೈರಸಂದ್ರ ಕೆರೆಯ ಹಿನ್ನೆಲೆಯಲ್ಲಿ ರಾಜಾ ಬಾಗಮನೆ ಅವರಿಗೆ ಸೇರಿದ ಬಾಗಮನೆ ಟೆಕ್‌ಪಾರ್ಕ್‌ನ ಚಿತ್ರವನ್ನೇ ಮುಖಪುಟಕ್ಕೆ ಬಳಸಿದ್ದರು. ಇದೊಂದು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದ ಭೂ ಒತ್ತುವರಿ.
ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಕೃಷ್ಣ ಅಧಿಕಾರ ದುರುಪಯೋಗ ಮಾಡಿದ್ದಾರೆ. ರಾಜಾ ಬಾಗಮನೆ ವ್ಯವಸ್ಥಾಪಕ ನಿರ್ದೇಶಕರಾಗಿರುವ ಬಾಗಮನೆ ಟೆಕ್ ಪಾರ್ಕ್ ಸಂಸ್ಥೆಯಲ್ಲಿ ಸಿದ್ಧಾರ್ಥ ಅವರೂ ಷೇರುದಾರರಾಗಿದ್ದಾರೆ. ಒತ್ತುವರಿಯಾದ ಭಾಗವನ್ನು ವಶಪಡಿಸಿಕೊಳ್ಳಲು ಸರ್ಕಾರ ಕೂಡಲೇ ಮುಂದಾಗಬೇಕು. ಈ ಸಂಬಂಧ `ಎನ್‌ಸಿಪಿಎನ್‌ಆರ್' ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ' ಎಂದು ಬುಧವಾರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಬಾಗಮನೆ ಟೆಕ್ ಪಾರ್ಕ್ ಸಂಸ್ಥೆಗೆ ಹಿಂದಿನಿಂದಲೂ ಒಳ್ಳೆಯ ಇತಿಹಾಸ ಇಲ್ಲ. ಸರ್ಕಾರಿ ಸ್ವಾಮ್ಯದ `ಎನ್‌ಜಿಇಎಫ್' ಸಂಸ್ಥೆಯನ್ನು ರೋಗಗ್ರಸ್ಥ ಎಂದು ಬಿಂಬಿಸಿ, ಉದ್ದೇಶಪೂರ್ವಕವಾಗಿ ಮುಚ್ಚಿಸಿ ಅದರ 40 ಎಕರೆ ಭೂಮಿಯನ್ನು ಪ್ರತಿ ಚದರ ಅಡಿಗೆ ಕೇವಲ 125 ರೂಪಾಯಿ ದರದಲ್ಲಿ ಖರೀದಿ ಮಾಡಿತು.

ಈ ಇತಿಹಾಸ ಗೊತ್ತಿದ್ದರೂ `ಕೆರೆ ಅಭಿವೃದ್ಧಿ ಪ್ರಾಧಿಕಾರ' ಬಾಗಮನೆ ಟೆಕ್‌ಪಾರ್ಕ್‌ನವರಿಗೆ ಭೈರಸಂದ್ರ ಕೆರೆಯನ್ನು ಅಭಿವೃದ್ಧಿಗೊಳಿಸಲು ದತ್ತು ನೀಡಿತು. ಕೆರೆ ಅಭಿವೃದ್ಧಿ ಮಾಡುವ ಬದಲು, ಸಂಸ್ಥೆಯವರು ಕೃಷ್ಣ ಅವರ ಅಧಿಕಾರದ ಬಲದಿಂದ ಅದನ್ನು ಕಬಳಿಸಿದರು. ಒತ್ತುವರಿಯಾದ ಬಗ್ಗೆ ಅಲ್ಲಿನ ನಿವಾಸಿಗಳಾದ ಬಿ.ಎಲ್.ಸತೀಶ್ ಮತ್ತಿತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗಲೇ ಈ ಸಂಗತಿ ಬೆಳಕಿಗೆ ಬಂದುದು' ಎಂದು ವಿವರಿಸಿದರು.

ಪೋಸ್ಕೊ ಕಾಲ್ಕಿತ್ತಿದ್ದಕ್ಕೆ ಸಂತಸ:  ದಕ್ಷಿಣ ಕೊರಿಯಾ ಮೂಲದ ಬಹುರಾಷ್ಟ್ರೀಯ ಉಕ್ಕು ಕಂಪೆನಿ ಪೋಸ್ಕೊ ಗದಗ ಜಿಲ್ಲೆಯಲ್ಲಿ ಅಗತ್ಯ ಭೂಮಿ ದೊರೆಯದೇ ಇರುವುದರಿಂದ ತನ್ನ ಉಕ್ಕು ಘಟಕ ಸ್ಥಾಪಿಸುವ ಪ್ರಸ್ತಾವದಿಂದ ಹಿಂದೆ ಸರಿದಿದ್ದನ್ನು ಸ್ವಾಗತಿಸಿದ ಹಿರೇಮಠ, `ಇದು ರೈತರ ಹೋರಾಟಕ್ಕೆ ಸಂದ ಜಯ. ಕೃಷಿ ಯೋಗ್ಯ ಜಮೀನನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಿಸುವ ಸರ್ಕಾರಗಳು ಈಗಲಾದರೂ ರೈತರ ಹಿತಾಸಕ್ತಿ ಕಾಯುವ ಕೆಲಸ ಮಾಡಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.