ADVERTISEMENT

ಕೆಂಪುದೀಪ ಮುಕ್ತರಿಗೆ ಗೃಹ ಬಂಧನದಲ್ಲಿ ರಕ್ಷಣೆ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಹುಬ್ಬಳ್ಳಿ: ಆ ಮನೆಯಲ್ಲಿ 22 ಯುವತಿಯರಿದ್ದಾರೆ. ಅವರೆಲ್ಲರೂ ಮುಂಬೈನ `ಕೆಂಪು ದೀಪ~ ಪ್ರದೇಶದಿಂದ ಬಲವಂತವಾಗಿ `ಮುಕ್ತ~ಗೊಂಡವರು. ಕಬ್ಬಿಣದ ಸರಳುಗಳಿಂದ ಬೇಲಿ ನಿರ್ಮಿತ ಮನೆಯಲ್ಲಿ ಈಗ `ಬಂದಿ~ಗಳಾಗಿದ್ದರೂ ಸುರಕ್ಷಿತರಾಗಿದ್ದಾರೆ!

ವಿಶೇಷವೆಂದರೆ, ಸಮಾಜದ ಮುಖ್ಯ ವಾಹಿನಿಯಲ್ಲಿ ಮತ್ತೆ ಸೇರಬೇಕೆಂಬ ನಿರೀಕ್ಷೆಯಲ್ಲಿರುವ ಆ ಯುವತಿಯರ ಪೈಕಿ 10 ಮಂದಿ ಎಚ್‌ಐವಿ ಸೋಂಕು ಪೀಡಿತರು. ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಆಮಿಷಕ್ಕೆ ಬಲಿಯಾಗಿ ವೇಶ್ಯಾವಾಟಿಕೆ ದಂಧೆಗೆ ಬಿದ್ದು ಏಡ್ಸ್ ತಗುಲಿದ್ದರೂ, ಅದರ ಅರಿವಿಲ್ಲದ ಮುಗ್ಧರು.

ಮಹಿಳೆಯರ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ಎಸಗುವ `ಉಜ್ವಲ~ ಯೋಜನೆಯನ್ವಯ ಸರ್ಕಾರೇತರ ಸಂಸ್ಥೆಯೊಂದು ನಗರದಲ್ಲಿ ಆರಂಭಿಸಿರುವ ಕೇಂದ್ರವೊಂದರಲ್ಲಿ ಈ ಯುುವತಿಯರು ದಿನ ಕಳೆಯುತ್ತಿದ್ದಾರೆ.

ಕೌಟುಂಬಿಕ ಸಮಸ್ಯೆ, ಪತಿಯ ಕಿರುಕುಳ, ಉದ್ಯೋಗ ನಿರೀಕ್ಷೆ ಮತ್ತಿತರ ಕಾರಣಗಳಿಗೆ ಮನೆ ಬಿಟ್ಟು ಹೋದವರು, ಆಕಸ್ಮಿಕವಾಗಿ ಪರಿಚಿತರಾದ `ಮಧ್ಯವರ್ತಿ~ಗಳ ಸಹವಾಸ, ಸಂಪರ್ಕದಿಂದ `ದೇಹ ಮಾರುವ~ ಅಡ್ಡೆ ಸೇರಿದ್ದರು.
`ಸಾಗಾಟ, ಮಾರಾಟ ಅಥವಾ ಇನ್ಯಾವುದೋ ಕಾರಣದಿಂದ ಅಡ್ಡದಾರಿ ಹಿಡಿದ ಇಂತಹ ಯುವತಿಯರಿಗಾಗಿ ಮೀಸಲಾದ ಈ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಉಚಿತ ಊಟ, ವಸತಿ, ವೈದ್ಯಕೀಯ, ಕಾನೂನು ನೆರವು, ವೃತ್ತಿ ತರಬೇತಿ, ಅವರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

ಯಾರೂ ತಪ್ಪಿಸಿಕೊಳ್ಳಬಾರದು, ಅನೈತಿಕ ಚಟುವಟಿಕೆಗೆ ಮತ್ತೆ ಮರಳಬಾರದು ಎಂಬ ಉದ್ದೇಶದಿಂದ ಸೂಕ್ತ ರಕ್ಷಣಾ ವ್ಯವಸ್ಥೆ ಇರುವ ಮನೆಯಲ್ಲಿ ಈ ಯವತಿಯರನ್ನು ಕೂಡಿಹಾಕಲಾಗಿದೆ. ಆದರೂ ಇತ್ತೀಚೆಗೆ ಒಬ್ಬಳು ತಪ್ಪಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಲಾಗಿದೆ~.

`ಈ ಯುವತಿಯರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕ ನಿಷೇಧಿಸಲಾಗಿದ್ದರೂ ಅವರ ಇಷ್ಟಾರ್ಥಗಳನ್ನು ಪೂರೈಸಲಾಗುತ್ತದೆ. ಆಪ್ತ ಸಮಾಲೋಚನೆ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮುಂದುವರಿದಿದೆ~ ಎಂದು ಆ ಕೇಂದ್ರದ ಮೇಲ್ವಿಚಾರಕಿ `ಪ್ರಜಾವಾಣಿ~ಗೆ ತಿಳಿಸಿದರು.

`ಇಲ್ಲಿರುವ ಯುವತಿಯರು ಬೆಂಗಳೂರು, ಹಾಸನ, ಗುಲ್ಬರ್ಗ, ತುಮಕೂರು ಜಿಲ್ಲೆಯ ನಿವಾಸಿಗಳು. ಸಾಗಾಟ, ಮಾರಾಟ ಜಾಲಕ್ಕೆ ಸಿಲುಕಿ ಮುಂಬೈಯ ಕಾಮಾಟಿಪುರದ `ಘರ್‌ವಾಲಿ~ಗಳ ಕೈಸೇರಿ ವೇಶ್ಯಾವಾಟಿಕೆ ವೃತ್ತಿಗೆ ಬಿದ್ದವರು. ಕೆಲವರು ಅಲ್ಲಿಂದ ಪಾರಾಗಲು ಬಯಸಿದ್ದರೂ ಸಾಧ್ಯವಾಗದೆ ನರಳಿದವರು. ಇನ್ನೂ ಕೆಲವರು ಬೇರೆ ದಾರಿ ಕಾಣದೆ ಆ ವೃತ್ತಿಗೆ ಒಗ್ಗಿಕೊಂಡವರು. ಮುಂಬೈನ ಚೆಂಬೂರಿನ ನವಜೀವನ ಮತ್ತು ಐಜಿಎಂ ಎಂಬ ಸ್ವಯಂಸೇವಾ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರ ಕಾರ್ಯಚರಣೆ ಫಲವಾಗಿ ಈ ಯುವತಿಯರು ಹೊರಬಂದಿದ್ದಾರೆ~ ಎಂದರು.

`ಲೈಂಗಿಕ ಶೋಷಣೆಗೆ ಒಳಪಟ್ಟ ಹಾಗೂ ಸಾಗಾಟ ಮತ್ತು ಮಾರಾಟ ಜಾಲದಿಂದ ರಕ್ಷಣೆಯಾದವರಿಗೆ `ಉಜ್ವಲ~ ಯೋಜಯಡಿ ರಕ್ಷಣೆ, ಪುನರ್ವಸತಿ ಹಾಗೂ ಮತ್ತೆ ಸಮಾಜದ ಮುಖ್ಯ ವಾಹಿನಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನೈತಿಕ ದಾರಿಯಲ್ಲಿ ಹೆಜ್ಜೆ ತುಳಿದ ಯುವತಿಯರಿಗೆ ಈ ಕೇಂದ್ರದಲ್ಲಿ ರಕ್ಷಣೆ, ಪುನವರ್ಸತಿ ಕಲ್ಪಿಸಲಾಗುತ್ತಿದೆ. ಜೊತೆಗೆ ಇತರರಂತೆ ಬದುಕಲು ಪೂರಕವಾದ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು. ಪೋಷಕರನ್ನು, ಪತಿಯನ್ನು ಮರಳಿ ಸೇರಲು ಬಯಸುವವರಿಗೂ ಸಹಕಾರ ನೀಡಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.