ADVERTISEMENT

ಕೆಎಟಿ ಪೀಠ ಸ್ಥಾಪನೆ ಭರವಸೆ: ಸತ್ಯಾಗ್ರಹ ಅಂತ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಧಾರವಾಡ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠ ಸ್ಥಾಪ­ನೆಗೆ ಒತ್ತಾಯಿಸಿ ಏಳು ದಿನಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರ ಸಂಘದ ಅಧ್ಯಕ್ಷ ಬಿ.ಡಿ.­ಹಿರೇಮಠ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಕಾನೂನು ಸಚಿವ ಟಿ.ಬಿ.­ಜಯಚಂದ್ರ ಅವರ ಭರವಸೆ ಹಿನ್ನೆಲೆ­ಯಲ್ಲಿ ಶನಿವಾರ ಅಂತ್ಯವಾಯಿತು.

ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಜಯಚಂದ್ರ, ‘ಕೆಎಟಿಯಲ್ಲಿ ಸುಮಾರು 25,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಸುಮಾರು ಐದು ಸಾವಿರ ಪ್ರಕರಣ­ಗಳು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಂಬಂಧಿ­ಸಿದ್ದಾಗಿವೆ. ಸದ್ಯ ಎರಡು ಪೀಠ­ಗಳ ಅವಶ್ಯಕತೆ ಇದ್ದು, ಒಂದನ್ನು ಧಾರ­ವಾಡ­ದಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಈ ಕುರಿತು ತಾವು ವಿಧಾನಸಭೆ­ಯಲ್ಲಿ ಉತ್ತರ ನೀಡಿದ್ದು, ನಾಳೆ (ಭಾನು­­ವಾರ) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, ಅನುಷ್ಠಾನ­ಗೊಳಿಸಲಾ­ಗು­ವುದು. ಯಾವುದೇ ಸಂದೇಹ ಬೇಡ. ಕೆಎಟಿ ಪೀಠ ಸ್ಥಾಪನೆ ಈ ಭಾಗದ ನ್ಯಾಯಯುತ ಬೇಡಿಕೆ. ಜೊತೆಗೆ ಈ ಭಾಗಕ್ಕೆ ನ್ಯಾಯಯುತವಾಗಿ ಏನು ಬರ­ಬೇಕೋ ಅದನ್ನು ದೊರಕಿಸಿ­ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಸಚಿವರು ಹಿರೇಮಠ ಅವರಿಗೆ ಎಳ­ನೀರು ಕುಡಿಸುವ ಮೂಲಕ ಸತ್ಯಾಗ್ರಹ ಅಂತ್ಯಗೊಳಿಸಿದರು. ನಂತರ ಪ್ರತಿಕ್ರಿಯಿ­ಸಿದ ಹಿರೇಮಠ, ‘ಕಾನೂನು ಸಚಿವರು ಪೀಠ ಸ್ಥಾಪನೆ ಭರವಸೆ ನೀಡಿದ್ದಾರೆ. ಆ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕ­ವಾಗಿ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದೇವೆ. 3 ತಿಂಗಳೊಳಗೆ ಭರವಸೆ ಅನು­ಷ್ಠಾನ­ಗೊಳ್ಳ­ದಿದ್ದರೆ ಮತ್ತೆ ಸತ್ಯಾಗ್ರಹ ಪುನರಾ­ರಂಭಿಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.