ADVERTISEMENT

ಕೆಎಸ್‌ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ

ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಪತ್ರ

ನೇಸರ ಕಾಡನಕುಪ್ಪೆ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
ಕೆಎಸ್‌ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ
ಕೆಎಸ್‌ಒಯುಗೆ ಮಾನ್ಯತೆ ನೀಡಲು ಒಪ್ಪಿಗೆ   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ಕ್ಕೆ 2018–19ರ ಸಾಲಿಗೆ ಶೈಕ್ಷಣಿಕ ಮಾನ್ಯತೆ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೊನೆಗೂ ಮುಂದಾಗಿದೆ.

ನವದೆಹಲಿಯಲ್ಲಿ ನಡೆಯುವ ಸಭೆಗೆ ಹಾಜರಾಗಲು ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರುವಂತೆ ಕೆಎಸ್‌ಒಯುಗೆ ಯುಜಿಸಿ ಪತ್ರ ಬರೆದಿದೆ.

ನೆರವಿಗೆ ಬಂದ ಸಂಸದೀಯ ಸಮಿತಿ: ಜೂನ್‌ 4ರಂದು ಮೈಸೂರಿನಲ್ಲಿ ನಡೆದ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ವಿ.ವಿಗೆ ಮಾನ್ಯತೆ ನೀಡುವಂತೆ ಕೋರಿ ಪ್ರಾತ್ಯಕ್ಷಿಕೆ ನೀಡಿರುವುದು, ಮಾನ್ಯತೆ ದೊರಕಿಸಿಕೊಡಲು ಸಹಾಯ ಮಾಡಿದೆ.

ADVERTISEMENT

ಸಭೆಯಲ್ಲಿ ಸಮಿತಿಯ ಸದಸ್ಯರಾದ ಲೋಕಸಭೆ ಹಾಗೂ ರಾಜ್ಯಸಭೆಯ 16 ಮಂದಿ ಸಂಸದರು ಭಾಗವಹಿಸಿದ್ದರು. ಇವರ ಎದುರು ವಿ.ವಿ ಎದುರಿಸುತ್ತಿರುವ ಸಮಸ್ಯೆಯನ್ನು ಕುಲಪತಿ ವಿವರವಾಗಿ ತೆರೆದಿಟ್ಟಿದ್ದರು. ‘2013–14ರಿಂದ ವಿ.ವಿ.ಗೆ ಮಾನ್ಯತೆಯಿಲ್ಲ. ಇಲ್ಲಿ ವ್ಯಾಸಂಗ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಾನ್ಯತೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ’ ಎಂದು ಕಟುವಾಗಿ ತಮ್ಮ ವಾದ ಮಂಡಿಸಿದ್ದರು. ಜತೆಗೆ, 2013–14 ಹಾಗೂ 2015–16 ಸಾಲಿಗೂ ಮಾನ್ಯತೆ ನೀಡಲು ಕೋರಿ ಸಮಿತಿಯ ಅಧ್ಯಕ್ಷರಿಗೆ ಮನವಿ ಪತ್ರವನ್ನೂ ನೀಡಿದ್ದರು.

ಕುಲಪತಿ ಮನವಿ ಆಲಿಸಿದ ಸಮಿತಿಯ ಸದಸ್ಯರು, ಕೂಡಲೇ ಮಾನ್ಯತೆ ನೀಡುವಂತೆ ಯುಜಿಸಿ ಹಾಗೂ ಮಾನವ ಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿಗೆ ಸೂಚನೆ ನೀಡಿದರು. ಸಭೆಯ ನಂತರ ಕೆಎಸ್‌ಒಯುಗೆ ಭೇಟಿ ನೀಡಿ ಸಿಬ್ಬಂದಿ ಜತೆಗೆ ಚರ್ಚಿಸಿದ್ದರು.

ಇದಾದ ಎರಡೇ ದಿನಕ್ಕೆ ಜೂನ್ 6ರಂದು ಯುಜಿಸಿಯಿಂದ ಪತ್ರ ಬಂದಿದೆ. ‘2018–19ನೇ ಸಾಲಿಗೆ ಮಾನ್ಯತೆ ಕೋರಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ತಲುಪಿದೆ. ಮಾನ್ಯತೆ ನೀಡಲು ನಾವು ಸಿದ್ಧರಿದ್ದೇವೆ. ಅರ್ಜಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರಿ’ ಎಂದು ಕೆಎಸ್‌ಒಯುಗೆ ತಿಳಿಸಿದೆ.

* ಮೇ 27ರಂದು 900 ಪುಟಗಳ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲಾಗಿತ್ತು. ಇದೀಗ ಮಾನ್ಯತೆ ನೀಡಲು ಯುಜಿಸಿ ಒಪ್ಪಿದೆ.

–ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.