ADVERTISEMENT

ಕೆಜೆಪಿಯ ಜನಸ್ನೇಹಿ ಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2012, 19:59 IST
Last Updated 28 ಡಿಸೆಂಬರ್ 2012, 19:59 IST
ಬಸವಕಲ್ಯಾಣದಲ್ಲಿ ಶುಕ್ರವಾರ ಕೆಜೆಪಿಯ ಜನಸ್ನೇಹಿ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೆರವಣಿಗೆಯಲ್ಲಿ ಭಾಗವಹಿಸಿದ್ದರು
ಬಸವಕಲ್ಯಾಣದಲ್ಲಿ ಶುಕ್ರವಾರ ಕೆಜೆಪಿಯ ಜನಸ್ನೇಹಿ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೆರವಣಿಗೆಯಲ್ಲಿ ಭಾಗವಹಿಸಿದ್ದರು   

ಬಸವಕಲ್ಯಾಣ : `ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದು ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಹ ಪರಿಸ್ಥಿತಿ ಇದೆ. ಇದನ್ನು ವಿಪಕ್ಷದವರು ಸಹ ಪ್ರಶ್ನಿಸುತ್ತಿಲ್ಲ' ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಕೆಜೆಪಿಯ ಜನಸ್ನೇಹಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, `ಮುಖ್ಯಮಂತ್ರಿಯಾಗಿ ನಾನು ಸೋರಿಕೆ ತಡೆದು ಸರ್ಕಾರದ ಬೊಕ್ಕಸ ತುಂಬಿದ್ದೇನೆ. ಭಾಗ್ಯಲಕ್ಷ್ಮಿ ಬಾಂಡ್, ಸಂಧ್ಯಾ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಆದರೆ ಈಗ ಸರ್ಕಾರ ನಡೆಸುವವರು ಯಾವ ವೇತನವನ್ನೂ ಕೊಡುತ್ತಿಲ್ಲ. ಸರ್ಕಾರದ ಬೊಕ್ಕಸ ಬರಿದಾಗಿದೆಯೇ' ಎಂದು ಪ್ರಶ್ನಿಸಿದರು.

`ಕಬ್ಬಿಣದ ಅದಿರು ಹೊರದೇಶಕ್ಕೆ ಹೋಗಬಾರದು ಎಂದು ಕಾನೂನು ತಂದವನು ನಾನೇ. ಇಷ್ಟಾದರೂ ಗಣಿ ಲೂಟಿ ಮಾಡಿದರು ಎಂದು ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ನನ್ನ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ 2ನೇ ಸ್ಥಾನದಲ್ಲಿತ್ತು' ಎಂದರು.

ಕಲ್ಯಾಣ ರಾಜ್ಯ ನಿರ್ಮಾಣಕ್ಕಾಗಿ ಕೆಜೆಪಿ ಪಕ್ಷ ಕಟ್ಟಿದ್ದೇನೆ. ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನಲಾಗುತ್ತದೆ. ಆದರೆ ಬಹಳಷ್ಟು ರಾಜ್ಯಗಳಲ್ಲಿ ಇಂಥ ಪಕ್ಷಗಳು ಆಡಳಿತ ನಡೆಸುತ್ತಿವೆ. ದೇಶದ 4 ಸಾವಿರ ಶಾಸಕರಲ್ಲಿ 2 ಸಾವಿರಕ್ಕಿಂತ ಹೆಚ್ಚಿನವರು ಇಂಥ ಪಕ್ಷಗಳಿಂದಲೇ ಆಯ್ಕೆಯಾಗಿದ್ದಾರೆ ಎಂದರು.

ಪಕ್ಷದ ಮುಖಂಡ ಗುರುಪಾದಪ್ಪ ನಾಗಮಾರಪಳ್ಳಿ ಮಾತನಾಡಿ, ಶಾಸಕ ಸ್ಥಾನ ತೊರೆದು ಕೆಜೆಪಿ ಸೇರಿದ ಬಸವರಾಜ ಪಾಟೀಲ ಅಟ್ಟೂರ್ ಸೇರಿ ಜಿಲ್ಲೆಯಲ್ಲಿ ಕೆಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಬೆಂಬಲಿಸಲು ಕೋರಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ಬಸವರಾಜ ಪಾಟೀಲ ಅಟ್ಟೂರ್, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಸವಕಲ್ಯಾಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ, ಮುಖಂಡರಾದ ಕೆ.ಎಚ್.ಶ್ರೀನಿವಾಸ, ಖುಸ್ರೋ ಕುರೇಶಿ, ಶಂಕರಗೌಡ ಪಾಟೀಲ, ನಾಗರಾಜ ಮಲ್ಯಾಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.