ADVERTISEMENT

ಕೆಪಿಎಸ್‌ಸಿ ಕಚೇರಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 20:20 IST
Last Updated 4 ಜುಲೈ 2013, 20:20 IST

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್‌ಹುದ್ದೆಗಳ ಭರ್ತಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳ ಕಚೇರಿಗಳ ಮೇಲೆ ಗುರುವಾರ ದಾಳಿ ನಡೆಸಿದ ಸಿಐಡಿ ಪೊಲೀಸರು ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳು ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶೋಧದ ವೇಳೆ ಕೆಲವು ಮಹತ್ವದ ಮಾಹಿತಿಗಳೂ ತನಿಖಾ ತಂಡಕ್ಕೆ ಲಭ್ಯವಾಗಿವೆ.

ಕೆಪಿಎಸ್‌ಸಿ ಪ್ರಧಾನ ಕಚೇರಿ ಉದ್ಯೋಗ ಸೌಧದ ಮೇಲೆ ದಾಳಿ ನಡೆಸಿದ ಕೆಪಿಎಸ್‌ಸಿ ಅಧ್ಯಕ್ಷರು (ಹಿಂದಿನ ಅಧ್ಯಕ್ಷ ಗೋನಾಳ ಭೀಮಪ್ಪ), ಆಯೋಗದ ಪೀಠಾಧಿಕಾರಿ ಅರುಣಾಚಲಂ, ಕಾರ್ಯದರ್ಶಿ ಕೆ.ಆರ್.ಸುಂದರ್, ಸದಸ್ಯೆ ಡಾ.ಮಂಗಳಾ ಶ್ರೀಧರ್, ಅವರ ಆಪ್ತ ಸಹಾಯಕ ಅಶೋಕ್‌ಕುಮಾರ್ ಅವರ ಕಚೇರಿಗಳಲ್ಲಿ ಶೋಧ ನಡೆಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಾಥ್ ಅಲಿಯಾಸ್ ಸೋಮೇಶ್ ಹಾಗೂ ರಾಜ್ಯ ಸರ್ಕಾರದ ಸಚಿವಾಲಯದ ನೌಕರ ರಾಜಶೇಖರ್ ಅವರ ವಿಧಾನಸೌಧದಲ್ಲಿನ ಕಚೇರಿಗಳ ಮೇಲೂ ದಾಳಿ ಮಾಡಿ ಶೋಧ ನಡೆಸಿದರು.

ಎಲ್ಲಾ ಆರೋಪಿಗಳ ಕಚೇರಿಗಳಲ್ಲಿ ಇದ್ದ ಕಂಪ್ಯೂಟರ್‌ಗಳ ಹಾರ್ಡ್ ಡಿಸ್ಕ್‌ಗಳು, ಪ್ರಮುಖ ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಆರೋಪಿಗಳ ಕೆಲಸ ವಹಿಗಳು, ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಪೂರಕವಾಗುವಂತಹ ಕೆಲವು ಮಹತ್ವದ ಮಾಹಿತಿಗಳು ತನಿಖಾ ತಂಡಕ್ಕೆ ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ಸಿಐಡಿ ಡಿಐಜಿ ಸೌಮೇಂದು ಮುಖರ್ಜಿ ದಾಳಿಯ ನೇತೃತ್ವ ವಹಿಸಿದ್ದರು. ಎಸ್‌ಪಿಗಳಾದ ಡಾ.ಬಿ. ಎ.ಮಹೇಶ್, ರವಿ ಡಿ.ಚನ್ನಣ್ಣನವರ್, ಅಬ್ದುಲ್ ಅಹದ್ ಹಾಗೂ ಒಂಬತ್ತು ಡಿವೈಎಸ್‌ಪಿಗಳು ದಾಳಿಯಲ್ಲಿ ಭಾಗವಹಿಸಿದ್ದರು. ಬುಧವಾರ ಈ ಪ್ರಕರಣದ ಎಂಟು ಆರೋಪಿಗಳಿಗೆ ಸಂಬಂಧಿಸಿದ 11 ಮನೆಗಳ ಮೇಲೆ ದಾಳಿ ನಡೆಸಿದ ಸಿಐಡಿ ಪೊಲೀಸರು, ಶೋಧ ಕಾರ್ಯ ನಡೆಸಿದ್ದರು.

ಮಾಹಿತಿಗೆ ಮನವಿ: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳಿಂದ ಮಾಹಿತಿ ಪಡೆಯಲು ತನಿಖಾ ತಂಡ ಮುಂದಾಗಿದೆ. ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದವರು ಮತ್ತು ನೊಂದ ಅಭ್ಯರ್ಥಿಗಳು ನೇರವಾಗಿ ಸಿಐಡಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಸಿಐಡಿ ಪ್ರಕಟಣೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊಂದಿರುವವರು ಡಿಐಜಿ ಸೌಮೇಂದು ಮುಖರ್ಜಿ (ಮೊಬೈಲ್ ಸಂಖ್ಯೆ 9480800112), ಎಸ್‌ಪಿ ರವಿ ಡಿ.ಚನ್ನಣ್ಣನವರ್ (ಮೊಬೈಲ್ ಸಂಖ್ಯೆ 9480800122) ಅಥವಾ ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್‌ಪಿ ಸಿ.ಎ.ಸೈಮನ್ (ಮೊಬೈಲ್ ಸಂಖ್ಯೆ 9480800135) ಅವರನ್ನು ಖುದ್ದಾಗಿ ಸಂಪರ್ಕಿಸಿ, ಮಾಹಿತಿ ನೀಡಬಹುದು ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.