ADVERTISEMENT

ಕೆರೆ-ಕೈಗಾರಿಕೆಗಳಿಗೆ ನೀರು ಹಂಚಿಕೆ ಇಲ್ಲ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 19:10 IST
Last Updated 15 ಫೆಬ್ರುವರಿ 2011, 19:10 IST

ವಿಜಾಪುರ: ಕೃಷ್ಣಾ ಎರಡನೆಯ ನ್ಯಾಯಮಂಡಳಿ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಪಿನ ಸೂಕ್ಷ್ಮ ಅಂಶಗಳ ಬಗೆಗೆ ನೀರಾವರಿ ತಜ್ಞರು-ಕಾನೂನು ಪರಿಣಿತರು ಅಧ್ಯಯನ ನಡೆಸುತ್ತಿದ್ದರೆ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುವ ಕಸರತ್ತು ಆರಂಭಿಸಿದ್ದಾರೆ.
ಆಲಮಟ್ಟಿಯಲ್ಲಿ ಸೋಮವಾರ ಈ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿರುವ ಸಚಿವ ಬೊಮ್ಮಾಯಿ, ಶೀಘ್ರವೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆಯುವುದಾಗಿಯೂ ಹೇಳಿದ್ದಾರೆ.

ಈ ತೀರ್ಪನ್ನು ಆಳವಾಗಿ ಅಧ್ಯಯನ ನಡೆಸಿರುವ ನೀರಾವರಿ ಎಂಜಿನಿಯರರು, ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗುವ ಹಲವಾರು ಅಂಶಗಳು ಈ ತೀರ್ಪಿನಲ್ಲಿರುವುದನ್ನು ಗುರುತಿಸಿದ್ದಾರೆ.

‘ರಾಜ್ಯ ಸರ್ಕಾರ ಸಲ್ಲಿಸಿದ್ದ ಆದ್ಯತಾ ಪಟ್ಟಿಯಂತೆ ನ್ಯಾಯಮಂಡಳಿಯು ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಒಂಬತ್ತು ಮತ್ತು ಉಪ ಕಣಿವೆಯ ಮೂರು ಯೋಜನೆಗಳಿಗೆ ಮಾತ್ರ ನಿರ್ದಿಷ್ಟವಾಗಿ ನೀರು ಹಂಚಿಕೆ ಮಾಡಿದೆ. ‘ಬಿ’ ಸ್ಕೀಂನಲ್ಲಿ ನೀಡಿರುವ 177 ಟಿಎಂಸಿ ಅಡಿ ನೀರನ್ನು ಯಾವ ಯೋಜನೆಗೆ ಬಳಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಕೈಗಾರಿಕೆಗಳ ಉಪಯೋಗಕ್ಕೆ ಹಾಗೂ ಕೆರೆ ತುಂಬುವ ಯೋಜನೆಗಳಿಗೆ ಪ್ರತ್ಯೇಕವಾಗಿ ನೀರು ಹಂಚಿಕೆ ಮಾಡಿಲ್ಲ. ಇದು ಈ ತೀರ್ಪಿನಲ್ಲಿರುವ ದೊಡ್ಡ ದುರಂತದ ಅಂಶ’ ಎಂಬುದು ನೀರಾವರಿ ಎಂಜಿನಿಯರರ ಆತಂಕ.

‘ಈ ತೀರ್ಪಿನಲ್ಲಿರುವ ಅಂಶಗಳನ್ನು ಅವಲೋಕಿಸಿದಾಗ ‘ಬಿ’ ಸ್ಕೀಂನಲ್ಲಿ ಹಂಚಿಕೆಯಾಗಿರುವ ನೀರನ್ನು ಕರ್ನಾಟಕ ಸರ್ಕಾರ ತನ್ನ ಯೋಜನೆಗಳಿಗೆ ಪುನರ್ ಹಂಚಿಕೆ ಮಾಡಿ ಮಾಸ್ಟರ್ ಪ್ಲಾನ್ ರೂಪಿಸಲು ಸಾಧ್ಯವಿಲ್ಲ. ಇದನ್ನು ಮಾಡಬೇಕಿದ್ದರೆ ನ್ಯಾಯಮಂಡಳಿ ಎದುರು ನಿಗದಿತ ಕಾಲಾವಧಿಯಲ್ಲಿ (ಇನ್ನು ಒಂದೂವರೆ ತಿಂಗಳ ಒಳಗಾಗಿ) ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ’ ಎಂಬುದು ಅವರು ನೀಡುವ ವಿವರಣೆ.
‘ನಮಗೆ ಹಂಚಿಕೆಯಾಗಿರುವ ನೀರನ್ನು ನಾವು ನಮ್ಮ ಯೋಜನೆಗಳಿಗೆ ಪುನರ್ ಹಂಚಿಕೆ ಮಾಡಬಹುದು. ಆ ಅವಕಾಶ ಇದೆ’ ಎಂಬುದು ಸಚಿವ ಬೊಮ್ಮಾಯಿ ಅವರ ಸಮಜಾಯಿಷಿ.
‘ಒಂದೊಮ್ಮೆ ಕೆರೆ-ಕೈಗಾರಿಕೆಗಳಿಗೆ ನೀರನ್ನು ಪುನರ್ ಹಂಚಿಕೆ ಮಾಡಲು ಅವಕಾಶ ಇದ್ದರೂ ಈಗಿರುವ ನೀರಾವರಿ ಯೋಜನೆಗಳಿಂದಲೇ ಅಷ್ಟೊಂದು ಪ್ರಮಾಣದ ನೀರನ್ನು ಕಡಿತ ಮಾಡಬೇಕಾಗುತ್ತದೆ.
 

ಹಾಗೆ ಮಾಡಿದರೆ ಆ ಯೋಜನಾ ಪ್ರದೇಶದ ರೈತರ ಪ್ರತಿರೋಧ ಎದುರಿಸಬೇಕಾಗುತ್ತದೆ. ಮೇಲಾಗಿ ನೀರು ಕಡಿತಗೊಳಿಸಿದರೆ ನೀರಾವರಿ ಕ್ಷೇತ್ರವೂ ಕಡಿಮೆಯಾಗಲಿದೆ’ ಎಂಬ ವಾದ ಜನಪ್ರತಿನಿಧಿಗಳದ್ದು.

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಪರಿಣಾಮದಿಂದಾಗಿ ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಹೊಸ ಕೈಗಾರಿಕೆಗಳಿಗೆ ಸುಮಾರು 80 ಟಿಎಂಸಿ ಅಡಿ  ನೀರು ಪೂರೈಸುವುದಾಗಿ ರಾಜ್ಯ ಸರ್ಕಾರ ಈ ಸಮಾವೇಶದಲ್ಲಿ ವಾಗ್ದಾನ ಮಾಡಿದೆ’ ಎಂದು ಉದ್ಯಮ ವಲಯದವರು ಹೇಳುತ್ತಿದ್ದಾರೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ವಿವಿಧ ಕೈಗಾರಿಕೆಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೆ ಸುಮಾರು 17 ಟಿಎಂಸಿ ಅಡಿ ನೀರು ಬಳಕೆಗೆ ಅನುಮತಿ ನೀಡಿದೆ. ಇನ್ನೂ ಸುಮಾರು 16 ಟಿಎಂಸಿ ಅಡಿ ನೀರು ಬೇಡಿಕೆಯ ಪ್ರಸ್ತಾವನೆಗಳು ಅನುಮೋದನೆಗಾಗಿ ಬಾಕಿ ಇವೆ. ಆದರೆ, ಸ್ಕೀಂ ‘ಎ’ ಅಡಿಯಲ್ಲಿ ಈ ಎರಡೂ ಜಲಾಶಯಗಳಿಂದ ಕೈಗಾರಿಕೆಗಳಿಗಾಗಿ ಕೇವಲ 5 ಟಿಎಂಸಿ ಅಡಿ ನೀರನ್ನು ಮಾತ್ರ ಬಳಸಲು ಅವಕಾಶವಿದೆ. ಎರಡನೆಯ ನ್ಯಾಯಮಂಡಳಿ ಕೈಗಾರಿಕಾ ಉದ್ದೇಶಕ್ಕಾಗಿ ಯಾವುದೇ ಹೆಚ್ಚುವರಿ ನೀರನ್ನು ಹಂಚಿಕೆ ಮಾಡದೇ ಇರುವುದರಿಂದ ಉಳಿದ ಕೈಗಾರಿಕೆಗಳಿಗೆ ನೀರನ್ನು ಎಲ್ಲಿಂದ ಕೊಡುವುದು? ಎಂಬುದು ಈಗ ಎದುರಾಗಿರುವ ದೊಡ್ಡ ಪ್ರಶ್ನೆ.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಮೇಲೂ ಈ ತೀರ್ಪು ದುಷ್ಪರಿಣಾಮ ಬೀರಲಿದೆ. ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 170ಕ್ಕೂ ಹೆಚ್ಚು ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ವಿಜಾಪುರ ಜಿಲ್ಲೆಯ 16 ಕೆರೆ ಮತ್ತು 6 ಬಾಂಧಾರ, ಬಾಗಲಕೋಟೆ ಜಿಲ್ಲೆಯ 7 ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಕಾಮಗಾರಿಯೂ ಪ್ರಗತಿಯಲ್ಲಿದೆ.

‘ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಥವಾ ಸಣ್ಣ ನೀರಾವರಿಗಾಗಿ ಈ ನ್ಯಾಯಮಂಡಳಿ ಯಾವುದೇ ನೀರಿನ ಹಂಚಿಕೆ ಮಾಡಿಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ನೀರನ್ನು ಪುನರ್ ಹಂಚಿಕೆ ಮಾಡದಿದ್ದರೆ ಕೃಷ್ಣಾ ಕಣಿವೆಯಲ್ಲಿ ಇನ್ನು ಮುಂದೆ ಯಾವುದೇ ಹೊಸ ಸಣ್ಣ ನೀರಾವರಿ ಯೋಜನೆಗಳನ್ನಾಗಲಿ ಅಥವಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನಾಗಲಿ ಕೈಗೆತ್ತಿಕೊಳ್ಳಲು ಅವಕಾಶ ಸಿಗಲಿಕ್ಕಿಲ್ಲ’ ಎಂದು ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.

‘ಬಿ’ ಸ್ಕೀಂ ಯೋಜನೆ ಜಾರಿಯಾದರೆ ಕೆರೆಗಳಿಗೆ ನೀರು ತುಂಬಿಸುವ ಅಗತ್ಯವಿಲ್ಲಎಂಬ ವಾದ ಅರ್ಧ ಮಾತ್ರ ಸರಿ. ಎತ್ತರ ಪ್ರದೇಶದಲ್ಲಿರುವ ಕರೆಗಳಿಗೆ ನದಿ ಮೂಲಗಳಿಂದ ನೀರು ತುಂಬಿಸುವುದು ಅನಿವಾರ್ಯ ಎಂಬುದು ಅವರ ಪ್ರತಿಪಾದನೆ.

ಹಿಪ್ಪರಗಿ ಹೆಚ್ಚುವರಿ ಯೋಜನೆ (4.00 ಟಿಎಂಸಿ ಅಡಿ), ಬಬಲೇಶ್ವರ ಏತ ನೀರಾವರಿ ಯೋಜನೆ ( 2.00 ಟಿಎಂಸಿ ಅಡಿ) ಸೇರಿದಂತೆ ಇತರ ಯೋಜನೆಗಳ ಪಾಡೇನು? ಎಂಬ ಜಿಜ್ಞಾಸೆಗೂ ಉತ್ತರ ದೊರೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT