ADVERTISEMENT

ಕೇಂದ್ರ ಬೊಕ್ಕಸಕ್ಕೆ ₹1,208 ಕೋಟಿ ವಂಚನೆ: ಸಿಬಿಐ ಪೊಲೀಸರಿಂದ ಸುಧೀರ್ ಶ್ರೀರಾಮ್ ಬಂಧನ

ಬಿ.ಎಸ್.ಷಣ್ಮುಖಪ್ಪ
Published 26 ಫೆಬ್ರುವರಿ 2018, 19:40 IST
Last Updated 26 ಫೆಬ್ರುವರಿ 2018, 19:40 IST
ಕೇಂದ್ರ ಬೊಕ್ಕಸಕ್ಕೆ ₹1,208 ಕೋಟಿ ವಂಚನೆ: ಸಿಬಿಐ ಪೊಲೀಸರಿಂದ ಸುಧೀರ್ ಶ್ರೀರಾಮ್ ಬಂಧನ
ಕೇಂದ್ರ ಬೊಕ್ಕಸಕ್ಕೆ ₹1,208 ಕೋಟಿ ವಂಚನೆ: ಸಿಬಿಐ ಪೊಲೀಸರಿಂದ ಸುಧೀರ್ ಶ್ರೀರಾಮ್ ಬಂಧನ   

ಬೆಂಗಳೂರು: ಅಂತರರಾಷ್ಟ್ರೀಯ ಲೋಹ ರಫ್ತು ವಹಿವಾಟಿನಲ್ಲಿ ಕೇಂದ್ರದ ಬೊಕ್ಕಸಕ್ಕೆ ₹ 1,208 ಕೋಟಿ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸುಧೀರ್‌ ಶ್ರೀರಾಮ್‌ ಫೆ.23ರಂದು ಸಿಬಿಐ ಪೊಲೀಸರಿಗೆ ಶರಣಾಗಿದ್ದಾರೆ.

ದುಬೈನಿಂದ 23ರಂದು ಸಂಜೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಧೀರ್ ಅವರನ್ನು ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದು ನಂತರ ಸಿಬಿಐ ಪೊಲೀಸರಿಗೆ ಒಪ್ಪಿಸಿದರು.

ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಧೀರ್‌ ಅವರನ್ನು ಶನಿವಾರ (ಫೆ.24) ಹಾಜರುಪಡಿಸಲಾಗಿದ್ದು ಮಾರ್ಚ್‌ 1ರವರೆಗೆ ಪೊಲೀಸ್‌ ವಶಕ್ಕೆ ನೀಡಿ ನ್ಯಾಯಾಧೀಶ ಸುಲ್ತಾನ್‌ ಪುರಿ ಆದೇಶಿಸಿದ್ದಾರೆ.

ADVERTISEMENT

ಸದ್ಯ ಸುಧೀರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಸಿಬಿಐ ಪೊಲೀಸರು ದೆಹಲಿಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಸುಧೀರ್ ಪರ ವಕೀಲ ಕಿರಣ್‌ ಜವಳಿ, ‘ಸುಧೀರ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ (ಕಾಫಿ ಪೋಸಾ) ಕಾಯ್ದೆ–1974ರ ಅನ್ವಯ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ’ ಎಂದೂ ಹೇಳಿದರು.

ಲೋಹದ ಸರಕುಗಳ ಸಾಗರೋತ್ತರ ರಫ್ತು ಉದ್ಯಮಕ್ಕೆ ಸಂಬಂಧಿಸಿದಂತೆ ಸುಧೀರ್ ಶ್ರೀರಾಮ್‌, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು: ಸುಧೀರ್ ಶ್ರೀರಾಮ್‌, ಮೆಸರ್ಸ್‌ ಫ್ಯೂಚರ್ ಮೆಟಲ್ಸ್‌ ಪ್ರೈವೇಟ್ ಲಿಮಿಟೆಡ್‌ (ಎಫ್‌ಎಂಪಿಎಲ್‌) ಹಾಗೂ ಫ್ಯೂಚರ್ ಎಕ್ಸಿಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಇಐಪಿಎಲ್‌) ಕಂಪನಿಗಳು 2008ರಲ್ಲಿ ನಿಕ್ಕಲ್ ಮತ್ತು ತಾಮ್ರವನ್ನು ಸರ್ಕಾರಿ ಸ್ವಾಮ್ಯದ ಸ್ಪೈಸಸ್‌ ಟ್ರೇಡಿಂಗ್‌ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪೆನಿಗೆ (ಎಸ್‌ಟಿಸಿಎಲ್‌) ಮಾರಾಟ ಮಾಡಿದ್ದವು.

‘ಈ ವ್ಯವಹಾರದಲ್ಲಿ ಸುಧೀರ್, ಎಫ್‌ಎಂಪಿಎಲ್‌ ಮತ್ತು ಎಫ್‌ಇಐಪಿಎಲ್‌ ಕಂಪನಿಗಳು ಎಸ್‌ಟಿಪಿಎಲ್‌ಗೆ ತಾಮ್ರದ ಬದಲು ಕಳಪೆ ಲೋಹ ನೀಡಿ ಮೋಸ ಮಾಡಿವೆ. ಇದರಿಂದ ಕೇಂದ್ರದ ಬೊಕ್ಕಸಕ್ಕೆ ₹ 1,208 ಕೋಟಿ ನಷ್ಟವಾಗಿದೆ’ ಎಂಬ ಆರೋಪದಡಿ ಎಸ್‌ಟಿಸಿಎಲ್‌, ಹೈಗ್ರೌಂಡ್ಸ್‌ ಠಾಣೆಯಲ್ಲಿ 2009ರ ಅಕ್ಟೋಬರ್ 19ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿತು.

ಪ್ರಕರಣವನ್ನು ನಂತರ ಸಿಬಿಐಗೆ ವರ್ಗಾಯಿಸಲಾಯಿತು. ತನಿಖೆ ಕೈಗೆತ್ತಿಕೊಂಡ ಸಿಬಿಐ, ಸುಧೀರ್ ಪಾಸ್‌ಪೋರ್ಟ್ (ಸಂಖ್ಯೆ Z1731411) ಮುಟ್ಟುಗೋಲು ಹಾಕಿಕೊಳ್ಳುವಂತೆ ಪಾಸ್‌ಪೋರ್ಟ್‌ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಇದರ ಅನುಸಾರ 2009ರ ಡಿಸೆಂಬರ್ 29ರಂದು ಪ್ರಾಧಿಕಾರವು ಸುಧೀರ್ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಂಡಿದೆ.

ರೆಡ್‌ ಕಾರ್ನರ್‌ ನೋಟಿಸ್‌: ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ನೋಟಿಸ್‌ ನೀಡಿದ್ದರೂ ಆರೋಪಿ ಸಿಬಿಐ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ 2013ರ ಏಪ್ರಿಲ್‌ 16ರಂದು ನಗರದ ಸಿಬಿಐ ನ್ಯಾಯಾಲಯ ಸುಧೀರ್ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿತು. ತದನಂತರ 2013ರ ಮೇ 23ರಂದು ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಆದೇಶಿಸಿತು.

ಇದನ್ನು ತಮ್ಮ ಸಹೋದರನ ಮುಖಾಂತರ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಮೂಲಕ ಪ್ರಶ್ನಿಸಿದ್ದ ಸುಧೀರ್, ’ಮುಟ್ಟುಗೋಲು ಹಾಕಿಕೊಂಡಿರುವ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸಲು ಆದೇಶಿಸಬೇಕು’ ಎಂದು ಕೋರಿದ್ದರು. ಆದರೆ, ಈ ಕೋರಿಕೆಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಿರಸ್ಕರಿಸಿತ್ತು.

‘ಸುಧೀರ್, ತುರ್ತು ಸಾರಿಗೆ ಪ್ರಮಾಣ ಪತ್ರದ ಮೂಲಕ ಭಾರತಕ್ಕೆ ಬರಬಹುದು. ಬಂದ ಕೂಡಲೇ ಅವರು ಜಾರಿ ನಿರ್ದೇಶನಾಲಯಕ್ಕೆ ಶರಣಾಗಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿತ್ತು.

ಅಂತರರಾಷ್ಟ್ರೀಯ ವಹಿವಾಟು: ‘ಸುಧೀರ್ ಶ್ರೀರಾಮ್‌, ನವೀನ್‌ ಶ್ರೀರಾಮ್ ಹಾಗೂ ಇವರ ಕುಟುಂಬದ ಸದಸ್ಯರು ಭಾರತ, ಯುಎಇ, ಸಿಂಗಪುರ, ಹಾಂಗ್‌ಕಾಂಗ್‌, ಅಮೆರಿಕ ಹಾಗೂ ಇತರೆಡೆ ಲೋಹದ ಅವಶೇಷಗಳನ್ನು ರಫ್ತು ಮಾಡುವ ಕಂಪನಿಗಳನ್ನು ನಡೆಸುತ್ತಿದ್ದಾರೆ’ ಎನ್ನುತ್ತಾರೆ ಸಿಬಿಐ ವಕೀಲರು.

‘ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಂಡ ನಂತರವೂ ಸುಧೀರ್ ಭಾರತದಿಂದ ದುಬೈಗೆ, ಅಲ್ಲಿಂದ ಸ್ಪೇನ್‌ಗೆ, ಸ್ಪೇನ್‌ನಿಂದ ಪುನಃ ದುಬೈಗೆ ತೆರಳಿ ಕೋರ್ಟ್‌ ಮತ್ತು ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದಾರೆ’ ಎಂಬುದು ಸಿಬಿಐ ವಾದ.

*

‘ಠಕ್ಕರನ್ನು ಸುಮ್ಮನೆ ಬಿಡುವುದಿಲ್ಲ’

‘ಸುಧೀರ್ ಶ್ರೀರಾಮ್‌ ಸಾವಿರಾರು ಕೋಟಿ ಮೊತ್ತದ ವಂಚನೆ ಎಸಗಿರುವ ಆರೋಪಿ. ಕೇಂದ್ರ ಸರ್ಕಾರ ಹಾಗೂ ಬ್ಯಾಂಕುಗಳಿಗೆ ವಂಚಿಸಿ ಆರ್ಥಿಕ ಅಪರಾಧ ಎಸಗಿದ ಇಂತಹ ಠಕ್ಕರನ್ನು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳಲು ಬಿಡುವುದಿಲ್ಲ’ ಎಂದು ಹೈಕೋರ್ಟ್‌ನ ಸಿಬಿಐ ವಕೀಲ ಪಿ.ಪ್ರಸನ್ನ ಕುಮಾರ್‌, ಸುಧೀರ್‌ ಬಂಧನಕ್ಕೆ ಪ್ರತಿಕ್ರಿಯಿಸಿದ್ದಾರೆ.

*

ಸುಧೀರ್‌ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಆರೋಪಗಳನ್ನು ಸರಿಯಾಗಿ ಪರಿಶೀಲಿಸದೆ ಪೊಲೀಸರು ಕೋರ್ಟ್‌ಗೆ ತಪ್ಪು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

–ಕಿರಣ್‌ ಜವಳಿ, ಸುಧೀರ್‌ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.