ADVERTISEMENT

ಕೇಂದ್ರ ಹುದ್ದೆಗಳಿಗೆ ರಾಜ್ಯದವರ ನಿರಾಸಕ್ತಿ!

ಮನೋಜ ಕುಮಾರ್ ಗುದ್ದಿ
Published 26 ಅಕ್ಟೋಬರ್ 2011, 19:35 IST
Last Updated 26 ಅಕ್ಟೋಬರ್ 2011, 19:35 IST

 ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳು ನಡೆಸುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ), ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ದೌಡಾಯಿಸಿ ಅರ್ಜಿ ಹಾಕುವ ಅಭ್ಯರ್ಥಿಗಳು ಕೇಂದ್ರೀಯ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಮಾತ್ರ ಸಕಾರಾತ್ಮಕ ಪ್ರತಿಕ್ರಿಯೆ ತೋರುತ್ತಿಲ್ಲ.

ಇದರಿಂದ ರಾಜ್ಯದ ಅಭ್ಯರ್ಥಿಗಳಿಗೆ ದಕ್ಕಬೇಕಿದ್ದ ಹುದ್ದೆಗಳು ಇತರರ ಪಾಲಾಗುತ್ತಿವೆ ಎಂಬ ಆತಂಕವೂ ಎಸ್‌ಎಸ್‌ಸಿಯ ಪ್ರಾದೇಶಿಕ ವಿಭಾಗದ ಆಡಳಿತ ವರ್ಗದಿಂದಲೇ ವ್ಯಕ್ತವಾಗಿದೆ. ರೈಲ್ವೆ ಇಲಾಖೆಯೊಂದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳಿಗೆ ಅಗತ್ಯ ಸಿಬ್ಬಂದಿಯನ್ನು ಪರೀಕ್ಷೆ, ಸಂದರ್ಶನಗಳನ್ನು ನಡೆಸುವ ಪ್ರಕ್ರಿಯೆಯನ್ನು ಇದು ನಿರ್ವಹಿಸುತ್ತಿದೆ. ಕಳೆದ ಫೆಬ್ರುವರಿಯಿಂದ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್ ಮತ್ತಿತರ ಭದ್ರತಾ ಸಿಬ್ಬಂದಿ ನೇಮಕಕ್ಕೆ ಪರೀಕ್ಷೆ ನಡೆಸುವ ಹೊಣೆಯನ್ನೂ ವಹಿಸಿಕೊಂಡಿದೆ.

ಕರ್ನಾಟಕ, ಕೇರಳ ರಾಜ್ಯಗಳು ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾದೇಶಿಕ ವಿಭಾಗವು 1990ರಲ್ಲಿ ಬೆಂಗಳೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿದೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ ಇದೀಗ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಮಾಹಿತಿ ಕೊರತೆಯೂ ಇದಕ್ಕೆ ಕಾರಣವಿರಬಹುದು. ಜೊತೆಗೆ ಭಾಷಾ ಜ್ಞಾನದ (ಹಿಂದಿ) ಕೊರತೆ ಕಾಡುತ್ತಿರಬಹುದು. ಆದರೆ ಇಂಗ್ಲಿಷ್‌ನಲ್ಲಿ ಉತ್ತಮ ಹಿಡಿತವಿರುವ ಅಭ್ಯರ್ಥಿಗಳು ಇಲ್ಲಿದ್ದಾರೆ. ಆದ್ದರಿಂದ ಭಾಷೆಯ ತೊಡಕು ಇರಲಿಕ್ಕಿಲ್ಲ ಎಂದು ಎಂದು ಎಸ್‌ಎಸ್‌ಸಿ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಇನ್ನೊಂದು ಕೌತುಕದ ಸಂಗತಿಯೆಂದರೆ ಕರ್ನಾಟಕಕ್ಕಿಂತ ವಿಸ್ತೀರ್ಣದಲ್ಲೂ, ಜನಸಂಖ್ಯೆಯಲ್ಲೂ ಕಡಿಮೆ ಇರುವ ಕೇರಳ ರಾಜ್ಯದ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಕೇಂದ್ರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ವಿವಿಧ ಹುದ್ದೆಗಳಾದ ಡೇಟಾ ಎಂಟ್ರಿ ಅಪರೇಟರ್ (ಡಿಇಎ) ಮತ್ತು ಕಿರಿಯ ಶ್ರೇಣಿ ಗುಮಾಸ್ತರ (ಎಲ್‌ಡಿಸಿ) ಒಂದು ಸಾವಿರ ಹುದ್ದೆಗಳಿಗೆ ಅರ್ಜಿಗಳನ್ನು ಈಚೆಗೆ ಆಹ್ವಾನಿಸಿತ್ತು.

ಇದೇ ಡಿಸೆಂಬರ್ 4ರಿಂದ ನಡೆಯಲಿರುವ ಅರ್ಹತಾ ಪರೀಕ್ಷೆಗಾಗಿ ಸಲ್ಲಿಕೆಯಾದ ಅರ್ಜಿಗಳು 20 ಲಕ್ಷ. ಅದರಲ್ಲಿ ಪ್ರಾದೇಶಿಕ ವಿಭಾಗಕ್ಕೆ ಸಲ್ಲಿಕೆಯಾದ ಅರ್ಜಿಗಳು 37 ಸಾವಿರ. ಅದರಲ್ಲಿ 30 ಸಾವಿರ ಅಭ್ಯರ್ಥಿಗಳು ಕೇರಳದವರಾದರೆ, ಉಳಿದ ಕೇವಲ 7 ಸಾವಿರ ಅಭ್ಯರ್ಥಿಗಳು ಮಾತ್ರ ಕರ್ನಾಟಕದವರು!

ಇಂಥ ನೀರಸ ಪ್ರತಿಕ್ರಿಯೆ ಎಸ್‌ಎಸ್‌ಎಗೆ ಮೊದಲ ಬಾರಿಯೇನೂ ಆಗಿಲ್ಲ. 2010-11ನೇ ಸಾಲಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಪೊಲೀಸ್ ಇನ್‌ಸ್ಪೆಕ್ಟರ್, ವಿವಿಧ ಇಲಾಖೆಗಳ ಸೆಕ್ಷನ್ ಆಫೀಸರ್, ಲೆಕ್ಕ ಪರಿಶೋಧಕರು, ಕಿರಿಯ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ದೇಶದಾದ್ಯಂತ ಅರ್ಜಿ ಆಹ್ವಾನಿಸಲಾಗಿತ್ತು. ಯಥಾಪ್ರಕಾರ ರಾಜ್ಯದಿಂದ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕೇವಲ 1.37 ಲಕ್ಷ!
ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಎಸ್‌ಎಸ್‌ಸಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಸ್.ಗೋಪಾಲನ್, `ಇದೀಗ ಕೇಂದ್ರ ಸರ್ಕಾರ ಶೇ 7ರಷ್ಟು ತುಟ್ಟಿಭತ್ಯೆಯನ್ನು ನೌಕರರಿಗೆ ನೀಡುತ್ತಿದೆ.

6ನೇ ವೇತನ ಆಯೋಗದ ಶಿಫಾರಸುಗಳನ್ನೂ ಜಾರಿಗೆ ತರುವ ಮೂಲಕ ಅತ್ಯಂತ ಆಕರ್ಷಕ ಸಂಬಳ ಮತ್ತು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ರಾಜ್ಯದ ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿಲ್ಲ. ಆಯೋಗ ಈ ಮುನ್ನ `ಎಂಪ್ಲಾಯ್‌ಮೆಂಟ್ ನ್ಯೂಸ್~ ಪತ್ರಿಕೆಯನ್ನು ಮಾತ್ರ ಪ್ರಕಟಿಸುತ್ತಿತ್ತು. ಇದೀಗ ವೆಬ್‌ಸೈಟ್ ಮೂಲಕವೇ ಬಹಳಷ್ಟು ಮಾಹಿತಿ ಪಡೆಯಬಹುದು. ಇದರಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಕಾಲಕಾಲಕ್ಕೆ ವೆಬ್‌ಸೈಟ್ ಗಮನಿಸುತ್ತಿದ್ದರೆ ಸಾಕು. ಆಯೋಗ ನಡೆಸುವ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದರೆ ಉದ್ಯೋಗ ದೊರೆಯುತ್ತದೆ~ ಎಂದರು.

ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ದೆಹಲಿ ರಾಜ್ಯಗಳು ಎಸ್‌ಎಸ್‌ಸಿಯ ಅಧಿಕ ಫಲಾನುಭವಿಗಳು ಎನ್ನುತ್ತವೆ ಅಂಕಿ-ಅಂಶಗಳು. ಇದಕ್ಕೆ ಮುಕುಟವಿಟ್ಟಂತೆ ದೇಶದಾದ್ಯಂತ ಇರುವ ಆಯೋಗದ ಒಂಬತ್ತು ವಿಭಾಗಗಳಲ್ಲಿ ಉತ್ತರ ವಿಭಾಗ, ಕೇಂದ್ರ ವಿಭಾಗ ಮತ್ತು ಪೂರ್ವ ವಿಭಾಗಗಳು ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸುತ್ತಿವೆ.

ಕಡಿಮೆ ಅರ್ಜಿ ಸಲ್ಲಿಕೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸ್ವತಃ ಗೋಪಾಲನ್ ಅವರು 600 ಕಾಲೇಜುಗಳ ಇ ಮೇಲ್ ವಿಳಾಸಗಳನ್ನು ಸಂಗ್ರಹಿಸಿ ಆಯೋಗ ನಡೆಸುವ ಪರೀಕ್ಷೆಗಳ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಬೆಂಗಳೂರಿನ ನಾಲ್ಕು ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಅಗತ್ಯ ಬಿದ್ದರೆ ಇನ್ನು ಮುಂದೆಯೂ ಉಳಿದ ಕಾಲೇಜುಗಳಿಗೆ ಹೋಗುವುದಾಗಿ ಅವರು ತಿಳಿಸಿದರು.

ಆಯೋಗವು ಶೀಘ್ರದಲ್ಲಿಯೇ ಹವಾಮಾನ ಇಲಾಖೆ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದೆ. ಮಾಹಿತಿಗೆ  ssckkr.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಆಸಕ್ತರಿಗೆ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.