ADVERTISEMENT

ಕೊಡಗಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:40 IST
Last Updated 21 ಮಾರ್ಚ್ 2011, 19:40 IST

ಬೆಂಗಳೂರು: ಕೊಡಗು ಜಿಲ್ಲೆಯನ್ನು ‘ಕೊಡವ ಲ್ಯಾಂಡ್’ ಎಂದು ಗುರುತಿಸಿ ಸ್ವಾಯತ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸದಸ್ಯರು ನಗರದ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು. ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಸಿಎನ್‌ಸಿ ಸದಸ್ಯರು ‘ಕೊಡಗು ಜಿಲ್ಲೆಗೆ ಸ್ವಾಯತ್ತ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸುಮಾರು 20 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಈ ಬೇಡಿಕೆಯನ್ನು ಈಡೇರಿಸಲು ಯಾವುದೇ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಸುಮಾರು 1.50 ಲಕ್ಷ ಸಂಖ್ಯೆಯಲ್ಲಿರುವ ಕೊಡವರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಇದರಿಂದಾಗಿ ಕೊಡವರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ದೂರಿದರು. ಸಂವಿಧಾನದ 340 ಹಾಗೂ 342ನೇ ವಿಧಿ ಅನ್ವಯ ಕೊಡವರನ್ನು ಪ್ರಾಚೀನ ಬುಡಕಟ್ಟು ಸಮುದಾಯವರೆಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡಬೇಕು.
 
ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ವಲಯದಲ್ಲಿ ಮೀಸಲಾತಿ ನೀಡಬೇಕು. ಸಂವಿಧಾನದ 350ನೇ ‘ಬಿ’ ವಿಧಿ ಅನ್ವಯ ಕೊಡವ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಬೇಕು.ಕೊಡವರ ಭಾಷೆ, ಭೂಮಿ ಹಾಗೂ ಆಚರಣೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕೊಡವರ ಭೂಮಿ, ಭಾಷೆ ಮತ್ತು ಪರಂಪರೆಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಸಿಎನ್‌ಸಿ ಸದಸ್ಯರಾದ ಕೆ.ಪ್ರಕಾಶ್, ಎಂ.ಕೆ.ತಾರಾ ಕೊಡವತಿ, ಬಿ.ದಿನು ಕೊಡವ, ಲೀಲಾ ಗಣಪತಿ, ರಮ್ಮಿ ನಾಣಯ್ಯ ಮತ್ತಿತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.