ADVERTISEMENT

ಕೊಡಗಿನಲ್ಲೂ ಐಎಸ್‌ ಚಟುವಟಿಕೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ವಿ.ಕೆ. ಹಂಸ, ಮನಾಫ್ ರೆಹಮಾನ್‌
ವಿ.ಕೆ. ಹಂಸ, ಮನಾಫ್ ರೆಹಮಾನ್‌   

ಸಿದ್ದಾಪುರ: ಉಗ್ರಗಾಮಿ ಸಂಘಟನೆ ಐಎಸ್‌ಗೆ ಸೇರಲು ಯುವಕರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಲಶ್ಯೇರಿಯಲ್ಲಿ ಬಂಧಿಸಲಾಗಿರುವ ಕೂಡಾಳಿ ನಿವಾಸಿ ವಿ.ಕೆ.ಹಂಸ (67) ಹಾಗೂ ಮನಾಫ್ ರೆಹಮಾನ್‌ (44) ಕೊಡಗು ಜಿಲ್ಲೆಯಲ್ಲೂ ಐಎಸ್‌ ಚಟುವಟಿಕೆ ನಡೆಸುತ್ತಿರುವುದನ್ನು ವಿಚಾರಣೆಯ ವೇಳೆ ಬಹಿರಂಗ ಪಡಿಸಿದ್ದಾರೆ.

ಕಣ್ಣೂರು ಜಿಲ್ಲೆಯ ಡಿವೈಎಸ್‌ಪಿ ಸದಾನಂದನ್ ನೇತೃತ್ವದ ತಂಡ ಗುರುವಾರ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿಯನ್ನು ತಿಳಿಸಿದ್ದಾರೆ.

‘ಕೊಡಗಿಗೂ ಐಎಸ್‌ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸುತ್ತಿದೆ. ಕಾರ್ಯಕರ್ತರು ಸಕ್ರಿಯವಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದಾರೆ ಎನ್ನುವ ವಿಷಯವನ್ನು ಅಡುಗೆ ಕೆಲಸ ಮಾಡುತ್ತಿರುವ ಹಂಸ ಒಪ್ಪಿಕೊಂಡಿದ್ದಾನೆ’ ಎಂದು ಕಣ್ಣೂರು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರು ತಿಂಗಳ ಹಿಂದೆ ಮಂಗಳೂರಿನಿಂದ ಸಿರಿಯಾಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಆರೋಪಿ ಮನಾಫ್‌ನಿಗೆ ಎನ್‌ಐಎ ತಂಡವು ಎಚ್ಚರಿಕೆ ನೀಡಿ ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಿತ್ತು. ಬಳಿಕ ಆತನ ಮೇಲೆ ಎನ್‌ಐಎ ನಿಗಾ ಇಟ್ಟಿತ್ತು. 1988ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಕೊಲ್ಲಿರಾಷ್ಟ್ರಗಳಿಗೆ ಪ್ರಯಾಣಿಸಿದ್ದ ಹಂಸ 20 ವರ್ಷಗಳ ಬಳಿಕ ಮುಂಬೈನಲ್ಲಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದ. ಬಿಡುಗಡೆಯಾದ ಬಳಿಕ ಐಎಸ್‌ ವಕ್ತಾರನೊಂದಿಗೆ ಹಂಸ ನಿಕಟ ಸಂಪರ್ಕ ಹೊಂದಿದ್ದ. ಸಂಘಟನೆಗೆ ಹೆಚ್ಚು ಮಂದಿಯನ್ನು ಕಳುಹಿಸುವುದು ಆತನ ಉದ್ದೇಶವಾಗಿತ್ತು ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.