ADVERTISEMENT

ಕೋಮು ಗಲಭೆಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:24 IST
Last Updated 8 ಜುಲೈ 2017, 6:24 IST
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಮಾತನಾಡಿದರು.   

ಉಡುಪಿ: ‘ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರ ಪ್ರಚೋದನೆಯಿಂದಾಗಿ ಕರಾವಳಿ ಭಾಗದಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿವೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ವಿಷಯದಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.

ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಚುನಾವಣೆ ಹತ್ತಿರ ಬಂದಿರುವುದರಿಂದ ರಾಜಕೀಯ ಕಾರಣಕ್ಕಾಗಿ ಬಿಜೆಪಿ ದಲಿತರ ಮೇಲೆ ಕಾಳಜಿ ತೋರಿಸುತ್ತಿದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಬಿಜೆಪಿ ಅಧಿಕಾರದ ಅವಧಿಯಲ್ಲಿ ದಲಿತರಿಗಾಗಿ ಏನನ್ನೂ ಮಾಡಲಿಲ್ಲ. ದಲಿತರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಸಹ ಮಾಡಲಿಲ್ಲ. ಈಗ ದಲಿತರ ಮನೆಗಳಿಗೆ ಭೇಟಿ ನೀಡುವ ಮೂಲಕ ಜನರನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿದ್ದರು.

ADVERTISEMENT

‘ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ಸಲುವಾಗಿ ಸಚಿವರ ಮೌಲ್ಯಮಾಪನ ಮಾಡುವುದಿಲ್ಲ. ಆದರೆ ಕೆಲವು ವರದಿಗಳನ್ನು ತರಿಸಿಕೊಂಡು ಹಾಗೂ ಸಮೀಕ್ಷೆ ನಡೆಸಿ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ’ ಎಂದು ಪರಮೇಶ್ವರ್ ಹೇಳಿದರು.

‘ಇಫ್ತಾರ್ ಕೂಟ ಏರ್ಪಡಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಇರಬೇಕು ಎಂಬ ಒಳ್ಳೆಯ ಸಂದೇಶ ನೀಡಿದ್ದಾರೆ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ಟೀಕಿಸುವುದು ಮತ್ತು ಚರ್ಚೆ ಮಾಡುವುದು ಅನಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.