ADVERTISEMENT

ಕೋಲಾರ: ಇಂದು ಕಾಂಗ್ರೆಸ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಬೆಂಗಳೂರು: ಕೋಲಾರದಲ್ಲಿ ಭಾನುವಾರ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣಾ ಪೂರ್ವ ಪ್ರಚಾರಕ್ಕೆ ಚಾಲನೆ ನೀಡುತ್ತಿದೆ. ಬೆಂಗಳೂರಿನಿಂದ ಕೋಲಾರದವರೆಗೆ ಬಸ್ಸಿನಲ್ಲಿ ಒಟ್ಟಾಗಿ ಪ್ರಯಾಣಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ರಾಜ್ಯ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಕಾರಣದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಸಮಾವೇಶ ಮತ್ತು ನಾಯಕರ ಪ್ರವಾಸ ಕಾರ್ಯಕ್ರಮಗಳನ್ನು ನಡೆಸಲು ಕೆಪಿಸಿಸಿ ನಿರ್ಧರಿಸಿದೆ. ಭಾನುವಾರ ಕೋಲಾರದಲ್ಲಿ ಕಾರ್ಯಕರ್ತರ ಸಮಾವೇಶದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ಬಳಿಕ ಇದೇ ಮಾದರಿಯಲ್ಲಿ ವಿವಿಧ ಹಂತಗಳಲ್ಲಿ ರಾಜ್ಯದ ಉದ್ದಗಲಕ್ಕೂ ಈ ಯಾತ್ರೆ ಸಂಚರಿಸಲಿದೆ.

ಚುನಾವಣಾ ಪ್ರಚಾರಕ್ಕಾಗಿ ಕೆಪಿಸಿಸಿ ಎರಡು ವೋಲ್ವೊ ಬಸ್‌ಗಳನ್ನು ಸಜ್ಜುಗೊಳಿಸಿದೆ. `ಕಾಂಗ್ರೆಸ್‌ನೊಂದಿಗೆ ಬನ್ನಿ- ಬದಲಾವಣೆ ತನ್ನಿ' ಎಂಬ ಘೋಷಣೆಗಳನ್ನು ಈ ಬಸ್‌ಗಳ ಮೇಲೆ ಬರೆಯಲಾಗಿದೆ. ಈ ಬಸ್‌ಗಳನ್ನೇ ಚುನಾವಣಾ ಪೂರ್ವ ಪ್ರಚಾರಕ್ಕೂ ಬಳಸಿಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯಿಲಿ, ಕೆ.ರೆಹಮಾನ್ ಖಾನ್ ಮತ್ತಿತರ ಪ್ರಮುಖ ಮುಖಂಡರು ಭಾನುವಾರ ಈ ಬಸ್‌ಗಳಲ್ಲೇ ಕೆಪಿಸಿಸಿ ಕಚೇರಿಯಿಂದ ಕೋಲಾರಕ್ಕೆ ತೆರಳುವರು. ಶಾಸಕರು, ಎಐಸಿಸಿ ಪದಾಧಿಕಾರಿಗಳು ಮತ್ತು ಕೆಪಿಸಿಸಿ ಮುಖಂಡರು ಕೂಡ ಇದೇ ಬಸ್‌ಗಳಲ್ಲಿ ಪ್ರಯಾಣಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.