ADVERTISEMENT

ಕ್ಯಾರಿ ಓವರ್: ವಿದ್ಯಾರ್ಥಿಗಳಿಗೆ ಜಯ, ಹೈಕೋರ್ಟ್‌ಗೆ ಅರ್ಜಿ- ಪ್ರವೇಶಕ್ಕೆ ಆದೇಶ,

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಬೆಂಗಳೂರು:  ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ `ಕ್ಯಾರಿ ಓವರ್~ ಪದ್ಧತಿಯಿಂದ ಪೇಚಿಗೆ ಸಿಲುಕಿದ್ದ ಕೆಲವು ಡಿಪ್ಲೊಮಾ ವಿದ್ಯಾರ್ಥಿಗಳ ನೆರವಿಗೆ ಹೈಕೋರ್ಟ್ ಧಾವಿಸಿದ್ದು, ಈ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಕಾಲೇಜಿಗೆ ಆದೇಶಿಸಿದೆ.

ಇದರಿಂದ ಐದನೆಯ ಸೆಮಿಸ್ಟರ್‌ಗೆ ಪ್ರವೇಶ ದೊರಕದೆ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿಗಳಿಗೆ ಜಯ ದೊರೆತಿದೆ.

`ಒಂದು ಮತ್ತು ಎರಡನೆಯ ಸೆಮಿಸ್ಟರ್‌ನ ಒಟ್ಟು 14 ವಿಷಯಗಳ ಪೈಕಿ ಕನಿಷ್ಠ 8 ವಿಷಯಗಳಲ್ಲಿ ಉತ್ತೀರ್ಣಗೊಂಡಿದ್ದರೆ ಮಾತ್ರ ಮೂರನೆಯ ಸೆಮಿಸ್ಟರ್‌ಗೆ ಹೋಗಲು ವಿದ್ಯಾರ್ಥಿಗಳು ಅರ್ಹರು. ಐದನೆಯ ಸೆಮಿಸ್ಟರ್‌ಗೆ ಅರ್ಹತೆ ಪಡೆಯಬೇಕಿದ್ದರೆ 3-4 ಸೆಮಿಸ್ಟರ್‌ಗಳಲ್ಲಿ 8 ವಿಷಯಗಳಲ್ಲಿ ಉತ್ತೀರ್ಣ ಕಡ್ಡಾಯ~ ಎನ್ನುವುದು ಈ `ಕ್ಯಾರಿ ಓವರ್~ ಪದ್ಧತಿಯ ನಿಯಮ.

ಇದನ್ನು ಸರ್ಕಾರ ಜುಲೈ 12ರಿಂದ ಜಾರಿಗೊಳಿಸಿದೆ.

ಈ ವಿದ್ಯಾರ್ಥಿಗಳೆಲ್ಲ ಅನೇಕ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದ ಕಾರಣದಿಂದ ಅವರಿಗೆ ಐದನೆ ಸೆಮಿಸ್ಟರ್‌ಗೆ ಕಾಲೇಜುಗಳು ಅನುಮತಿ ನೀಡಿರಲಿಲ್ಲ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

`ಸರ್ಕಾರ ಸುತ್ತೋಲೆ ಹೊರಡಿಸಿರುವುದು ಈಚೆಗಷ್ಟೇ. ಅದನ್ನು ಈ ವಿದ್ಯಾರ್ಥಿಗಳಿಗೆ ಅನ್ವಯ ಮಾಡುವುದು ಸರಿಯಲ್ಲ. ಅಷ್ಟೇ ಅಲ್ಲದೇ, ಇವರೆಲ್ಲ ಗ್ರಾಮೀಣ ಪ್ರದೇಶಗಳಿಂದ ಬೆಂಗಳೂರಿಗೆ ಬಂದವರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟ, ನಗರ ಪ್ರದೇಶಗಳಷ್ಟು ಉತ್ತಮ ಇರದ ಕಾರಣದಿಂದ, ಇವರು ಹೆಚ್ಚಿನ ವಿಷಯಗಳಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿಲ್ಲ. ಮುಂದಿನ ಸೆಮಿಸ್ಟರ್‌ಗೆ ಇವರಿಗೆಲ್ಲ ಪ್ರವೇಶ ನಿರಾಕರಿಸಿದರೆ, ಅವರ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುತ್ತದೆ~ ಎಂದು ಅವರ ಪರ ವಕೀಲ ಬಿ.ಆರ್.ವಿಶ್ವನಾಥ ವಾದಿಸಿದರು.

ಈ ವಾದವನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮಾನ್ಯ ಮಾಡಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.