ADVERTISEMENT

ಕ್ರೌರ್ಯದ ಕಥೆ ಹೇಳಿದ ಬಾಸುಂಡೆ

ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿ ಸಂತ್ರಸ್ತ ಮಹಿಳೆ

ಡಿ.ಬಿ, ನಾಗರಾಜ
Published 5 ಜುಲೈ 2017, 20:26 IST
Last Updated 5 ಜುಲೈ 2017, 20:26 IST
ಮಹಿಳೆಯ ಬೆನ್ನ ಮೇಲೆ ಮೂಡಿರುವ ಬಾಸುಂಡೆಗಳು
ಮಹಿಳೆಯ ಬೆನ್ನ ಮೇಲೆ ಮೂಡಿರುವ ಬಾಸುಂಡೆಗಳು   

ವಿಜಯಪುರ: ‘ಅಪವಾದ ಹೊತ್ಕೊಂಡು, ಊರಾಗ ಮರ್ಯಾದಿ ಕಳ್ಕೊಂಡ್‌ ಮ್ಯಾಲೆ ನಾ ಯಾಕಾರ ಜೀವಂತ ಇರಬೇಕು? ಹ್ವಾದ ಮಾನ ಹೊಳ್ಳಿ ಬರತೇತಾ? ಉಸುರು  ಇರೋ ಮಟ ಕೆಟ್‌ ಮಾತ್‌ ಕೇಳಾಕ ನನ್ನಕಡಿಂದ ಆಗೋದಿಲ್ಲ. ದುಡ್ಕೊಂಡು ತಿನ್ನೋ ಮಂದಿ ನಾವು. ನನ್ನ ಕೂಸುಗಳಿಗೂ ನನ್ನಿಂದ ಕೆಟ್ಟಹೆಸ್ರು... ಈ ಪಾಪಿ ಜೀವಾನಾ ಯಾಕಾರ ಹಿಡ್ಕೊಂಡ್‌ ಇಟ್ಕೊಳ್ಳಿ ನಾ...?’

ಇಂಡಿ ತಾಲ್ಲೂಕು ಹಿರೇಮಸಳಿ ಗ್ರಾಮದಲ್ಲಿ ಸೋಮವಾರ ಸಾರ್ವಜನಿಕವಾಗಿ ಥಳಿತಕ್ಕೊಳಗಾದ ಸಂತ್ರಸ್ತ ಮಹಿಳೆಯ ನೋವಿನ ನುಡಿಗಳಿವು.

‘ಮೈಗೆ ಹಚ್ಚಿದ್ದ ಖಾರದಪುಡಿಯ ಉರಿ ತಡ್ಕೊಳ್ಳಾಕ ಆಗವಲ್ದು. ಒನ್ನೇ (ಒಂದನೇ) ದಿನ ಭಾರೀ ತ್ರಾಸ್‌ ಪಟ್ಟೆ. ನನ್ನ ಬಡ್ದು (ಹೊಡೆದು) ಮೂರ್ ದಿನಾ ಆತು. ಇವತ್ತಿಗೂ ಕುಂದ್ರಾಕ ಆಗವಲ್ದು. ನಡ್ಯಾಕ ತ್ರಾಸ ಆಗತೈತಿ; ಮಕ್ಕೊಂಡ್ರೂ ಮೈನೋವು’ ಎಂದು ಬಿಕ್ಕಿದ ಆ ಹೆಣ್ಣುಮಗಳು ಮಲಗಿದಲ್ಲಿಂದ ತುಸು ಮಗ್ಗುಲಾದಾಗ ಬೆನ್ನ ಮೇಲಿನ ಬಾಸುಂಡೆಗಳು ಅವರ ಪರಿಸ್ಥಿತಿಯನ್ನು ವಿವರಿಸಿದವು.

‘ಮೈಯೆಲ್ಲ ಬಾಸುಂಡಿ ಬಂದಾವ್ರಿ. ಒಂಚೂರು ಅತ್ತಿತ್ತ ಹೊಳ್ಳಾಡಿದ್ರೂ ಜೀವ ಹೋದಂಗ ಆಗತೈತಿ. ನೋವು, ಒಳಗಿನ ಸಂಕಟ ತಡೆಯಾಕ ಆಗಂಗಿಲ್ಲ.....’ ಎಂದು ಕಣ್ಣೀರಿಟ್ಟರು.

‘ಅನ್ನ ತಿನ್ನಾಕೂ ಮನಸಾಗವಲ್ದು. ಸೋಮಾರ ಸಂಜಿ ಮುಂದ ಅವರ ಮನೀಂದ ಎತ್ತಿ ಹೊರಗ ಒಗದಿದ್ದ ಅಷ್ಟ... ಮನೀಗೆ ಹೆಂಗ್‌ ಬಂದೆ  ಅನ್ನೋದ.... ಗೊತ್ತಿಲ್ಲ.  ಓಣ್ಯಾಗ ಇದ್ದವ್ರ ಯಾರೂ ಒಂದ್ ತುಣುಕು ಅರಿಬಿ ಕೊಟ್ಟು ನನ್ನ ಮಾನಾ ಕಾಪಾಡಲಿಲ್ಲ’ ಎಂದು ಗಂಟಲು ತುಂಬಿಕೊಂಡರು.

‘ಖಾರದಪುಡಿಯ ಉರಿ ತಡೀಲಾರ್ದ, ಮನೀಗ ಬರ್ತಿದ್ದಂಗ ಏಳೆಂಟು ಬಿಂದಿಗಿ ನೀರು ತಲಿ ಮ್ಯಾಲ ಸುರುಕೊಂಡೆ. ಬೆತ್ತಲಾಗೀನ  ಕೌದಿ ಹೊತ್ಕೊಂಡು ಮಕ್ಕೊಂಡಿದ್ದ ಅಷ್ಟ ನೆನಪು. ಎಚ್ಚರ ಆದಾಗ ತಡರಾತ್ರಿ ಆಗಿತ್ತು. ಗಂಡ–ಅತ್ತಿ ಕಾವಲಿಗಿದ್ದರು. ನಡದಿದ್ದನ್ನ ಎಲ್ಲಾ ಹೇಳಿ ನಾ ಬದೂಕುದಿಲ್ಲ.... ನನ್ನ ತ್ರಾಸು ಯಾವ ಹೆಣ್‌ಮಗಳಿಗೂ ಬರಬಾರ್ದು. ಬೆಳಿಗ್ಗೆ ನಮ್ಮಕ್ಕ ಹಿರೇರೂಗಿಯಿಂದ ಬಂದ್‌ ಮ್ಯಾಲನ... ಆಕಿ ಕಡಿಂದ ಮೈಗೆ  ಅರಿಬಿ ಹಾಕಸ್ಕೊಂಡೆ.....’ ಎಂದು ಕಣ್ಣೀರು ಹರಿಸಿದರು.

ಕಂಪ್ಲೇಂಟ್‌ ಕೊಡಾಕಂತ ಸ್ಟೇಷನ್‌ಗೆ ಹೋದ್ರ ಅಲ್ಲೂ ದಬ್ಬಾಳಿಕಿ ಮಾಡಿದ್ರು. ನೊಂದ್ಕೊಂಡು ದವಾಖಾನಿ ಸೇರಿದ ಮ್ಯಾಲ ಮೈಗೆ ಸ್ವಲ್ಪ ಆರಾಮಾಗೇತಿ. ಆದ್ರ ಈಗ್ಲೂ ಆ ನೋವು ಸಹಿಸಾಕ ಆಗವಲ್ದು’ ಎಂದರು.

ಪೈಶಾಚಿಕ ಕೃತ್ಯ: ‘ಮಧ್ಯಾಹ್ನ ಮೂರೂವರಿಗೆ ಮೌಲಾಲಿ ಮನಿ ಒಳಗ ಕೂಡಿ ಹಾಕಿದ್ರು. ನಾಕ ಮಂದಿ ಗಂಡಸ್ಮಕ್ಕಳು, ಐದ್‌ ಮಂದಿ ಹೆಣ್ಮಕ್ಕಳು ಸಂಜಿ ಆರರ ತನಕ ಹೊಡದ್ರು. ಮೈಮ್ಯಾಲಿನ ಅರಿಬಿ ಹರದ್ರು. ಕೈಗೆ ಸಿಕ್ಕ ಸಾಮಾನಿಂದ ಬಡದ್ರು. ಚಾಕುದಿಂದ ಗೀರಿದ್ರು. ಗಾಯ  ಆಗಿ ರಕ್ತ ಸೋರಾಕತ್ತಿದ ಮ್ಯಾಲ ಅದಕ್ಕ ಖಾರದಪುಡಿ ಉಗ್ಗಿ ಮತ್ತ ಮತ್ತ ಹೊಡದ್ರು. ಗುಪ್ತಾಂಗಕ್ಕೂ ಖಾರದಪುಡಿ ತುಂಬಿದರು. ಕೈಮುಗಿದು ಬೇಡ್ಕೊಂಡ್ರೂ ಬಿಡಲಿಲ್ಲ. ತಲೆಗೆ ಪೆಟ್ಟು ಬಿದ್‌ ಮ್ಯಾಲ ಪ್ರಜ್ಞೆ ಹೋತು. ಮನಿ ಒಳಗ... ಸತ್ತಗಿತ್ತಹೋದಾಳು ಅಂತ ಬಡಿಯೋದ್ ನಿಲ್ಸಿ, ಎಲ್ರೂ ಸೇರಿ ಎತ್ತಿ ಹೊರಗ ಒಗದ್ರು...’ ಎಂದು ಮೌಲಾಲಿ ಕುಟುಂಬದವರು ನಡೆಸಿದ ಪೈಶಾಚಿಕ ಕೃತ್ಯವನ್ನು ಸಂತ್ರಸ್ತೆ ವಿವರಿಸಿದರು.

ವಿವಸ್ತ್ರ ಪ್ರಕರಣ: ಆರು ಮಂದಿ ಬಂಧನ
ವಿಜಯಪುರ:
ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಇಂಡಿ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಸುಗುರಾ ಮೌಲಾಲಿ ಗುಂಡೋಡಗಿ, ಸಿಕಂದರ್ ಇಸ್ಮಾಯಿಲ್ ಅಗರಖೇಡ, ಶಬಾನಾ ಇಸ್ಮಾಯಿಲ್ ಅಗರಖೇಡ, ಶಬ್ಬೀರ್‌ ಇಸ್ಮಾಯಿಲ್ ಅಗರಖೇಡ, ಫರೀದಾ ಶಬ್ಬೀರ್‌ ಅಗರಖೇಡ ಹಾಗೂ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಸುಭಾಸ ರಾಮು ಛತ್ರಿ ಬಂಧಿತರು’ ಎಂದು ಸಿಪಿಐ ಚಂದ್ರಕಾಂತ ನಂದರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಆರೋಪಿ ಶರೀಫಾ, ಇಸ್ಮಾಯಿಲ್ ಬಾಷಾಸಾಬ್ ಅಗರಖೇಡ, ಇಸ್ಫಾಕ್ ಇಸ್ಮಾಯಿಲ್ ಅಗರಖೇಡ ತಲೆ ಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
*
ಸಂತ್ರಸ್ತ ಮಹಿಳೆ ಮಾನಸಿಕ ಆಘಾತಕ್ಕೀಡಾಗಿದ್ದಾರೆ. ದೈಹಿಕವಾಗಿಯೂ ಜರ್ಜರಿತರಾಗಿದ್ದಾರೆ. ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕೈದು ದಿನ ಬೇಕು. ಚಿಕಿತ್ಸೆ ನೀಡುತ್ತಿದ್ದೇವೆ
ಡಾ. ಮಹೇಂದ್ರ ಕಾಪಸೆ,
ಜಿಲ್ಲಾ ಶಸ್ತ್ರಚಿಕಿತ್ಸಕ
*
ಅವತ್ತಿಂದ್ಲೂ ನಾ ಸಾಯ್ತೇನಿ ಅನ್ನಾಕತ್ತಾಳ. ಎಷ್ಟ... ಧೈರ್ಯ ಹೇಳಿದ್ರೂ ಅದರಿಂದ ಹೊರಗ ಬಂದಿಲ್ಲ. ದುಡ್ಕೊಂಡು ತಿನ್ನೋನು ನಾನು; ಕೂಲಿ ಕೆಲ್ಸಾ ಬಿಟ್ಟು ಹೆಂಡ್ತಿಗೆ ಕಾವಲು ಅದೇನಿ
ಸಂತ್ರಸ್ತ ಮಹಿಳೆ ಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.