ADVERTISEMENT

ಖಾತೆ,ಲಾಕರ್ ತಪಾಸಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST
ಖಾತೆ,ಲಾಕರ್ ತಪಾಸಣೆ
ಖಾತೆ,ಲಾಕರ್ ತಪಾಸಣೆ   

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಜತೆ ಬಂಧಿಸಲಾಗಿರುವ  ಓಬಳಾಪುರಂ ಮೈನಿಂಗ್ ಕಂಪೆನಿ  ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಸಿಬಿಐ ಸಿಬ್ಬಂದಿ ಶನಿವಾರ ಬೆಳಿಗ್ಗೆ ಬಳ್ಳಾರಿಗೆ ಕರೆ ತಂದು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿರುವ ಅವರ ಲಾಕರ್‌ಗಳ ತಪಾಸಣೆ ನಡೆಸಿದರು.

ಬೆಳಿಗ್ಗೆ 9ಕ್ಕೆ ನೇರವಾಗಿ ಸ್ಥಳೀಯ ಪಾರ್ವತಿ ನಗರದ ಬ್ಯಾಂಕ್ ಶಾಖೆಗೆ ಬಂದ ಸಿಬಿಐ ಇನ್‌ಸ್ಪೆಕ್ಟರ್ ಸೋಮಯ್ಯ ನೇತೃತ್ವದ ತಂಡವು ರಾತ್ರಿ 8ರವರೆಗೂ ಶ್ರೀನಿವಾಸ ರೆಡ್ಡಿ ಸಮ್ಮುಖದಲ್ಲೇ ಅವರ ಖಾತೆ, ವ್ಯವಹಾರಗಳ ಕುರಿತ ದಾಖಲೆಗಳು ಮತ್ತು ಸೇಫ್ ಲಾಕರ್‌ಗಳ ತಪಾಸಣೆ ಮಾಡಿತು.

ಶುಕ್ರವಾರ ಮಧ್ಯರಾತ್ರಿ ತಾಲ್ಲೂಕಿನ ಪರಮದೇವನಹಳ್ಳಿ ಪೊಲೀಸ್ ಠಾಣೆಗೆ ಶ್ರೀನಿವಾಸ ರೆಡ್ಡಿ ಜತೆ ಆಗಮಿಸಿದ ಸಿಬಿಐನ ಕೆಲವು ಸಿಬ್ಬಂದಿ, ರಾತ್ರಿ ಅಲ್ಲಿಯೇ ತಂಗಿದ್ದು, ಶನಿವಾರ ಬೆಳಿಗ್ಗೆ ನೇರವಾಗಿ ಸಿರುಗುಪ್ಪ- ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆ  ತಲುಪಿದರು.

ದಾಖಲೆಗಳ ಪರಿಶೀಲನೆ: ಬ್ಯಾಂಕ್‌ನಲ್ಲಿ ಶ್ರೀನಿವಾಸ ರೆಡ್ಡಿ ಹೊಂದಿರುವ ಖಾತೆಗಳು, ಈವರೆಗಿನ ವಹಿವಾಟು, ಲಾಕರ್ ಕುರಿತ ವಿವರಗಳನ್ನು ಪಡೆದ ಬಳಿಕ, ಅವರಿಗೆ ಸಂಬಂಧಿಸಿದ 8ಕ್ಕೂ ಅಧಿಕ ಲಾಕರ್‌ಗಳನ್ನು ತಪಾಸಣೆ ಮಾಡಿದರು.

ಚಿನ್ನ, ನಗದು ವಶ?: ಶ್ರೀನಿವಾಸ ರೆಡ್ಡಿ ಖಾತೆಯಲ್ಲಿದ್ದ ರೂ 2 ಲಕ್ಷ ನಗದು ಮತ್ತು 13 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಡೀ ದಿನ ತಪಾಸಣೆ: ಬ್ಯಾಂಕ್ ಬಾಗಿಲು ತೆರೆಯುವ ಮೊದಲೇ ರೆಡ್ಡಿ ಜತೆ ಆಗಮಿಸಿದ ಸಿಬಿಐ ಸಿಬ್ಬಂದಿ, ರಾತ್ರಿ 8ರವರೆಗೂ ಸತತ ತಪಾಸಣೆಯಲ್ಲಿ ತೊಡಗಿದ್ದರು.

ಬೆಳಿಗ್ಗೆ 11ಕ್ಕೆ ಚಹ, ಮಧ್ಯಾಹ್ನ 1.15ಕ್ಕೆ ಊಟವನ್ನು ಬ್ಯಾಂಕ್‌ಗೇ ತರಿಸಿ, ಶ್ರೀನಿವಾಸ ರೆಡ್ಡಿ ಅವರಿಗೆ ನೀಡಿದ ಅಧಿಕಾರಿಗಳು ತಾವೂ ಅಲ್ಲೇ ಊಟ ಮಾಡಿದರು. ಊಟದ ನಂತರವಷ್ಟೇ ಲಾಕರ್‌ಗಳ ತಪಾಸಣೆ ಆರಂಭಿಸಿದರು.

ಗ್ರಾಹಕರಿಗೆ ಪ್ರವೇಶ: ಬ್ಯಾಂಕ್‌ಗೆ ಆಗಮಿಸಿದ ಗ್ರಾಹಕರನ್ನು ತಪಾಸಣೆಗೆ ಒಳಪಡಿಸಿ, ಮೊಬೈಲ್ ದೂರವಾಣಿ ಉಪಕರಣ ಸ್ವಿಚ್ ಆಫ್ ಮಾಡುವಂತೆ ಸೂಚಿಸಿ ಒಳಬರಲು ಅವಕಾಶ ನೀಡಿದ ಪೊಲೀಸರು, ಬ್ಯಾಂಕ್ ಜತೆ ವ್ಯವಹಾರ ಹೊಂದಿರದವರಿಗೆ ಅವಕಾಶ ನಿರಾಕರಿಸಿದರು.

ಕುರುಗೋಡಿನಲ್ಲೂ ದಾಳಿ: ಏತನ್ಮಧ್ಯೆ, ತಾಲ್ಲೂಕಿನ ಕುರುಗೋಡು ಗ್ರಾಮದಲ್ಲಿರುವ  ಬಿಜೆಪಿ ಮುಖಂಡ ಆನಂದ್ ಚೌಧರಿ ಅವರ ಅಕ್ಕಿ ಗಿರಣಿಯೊಂದರ ಮೇಲೂ ಬೆಳಿಗ್ಗೆ ದಾಳಿ ನಡೆಸಿದ ಸಿಬಿಐನ ಇನ್ನೊಂದು ತಂಡ, ಕೆಲವು ವಸ್ತುಗಳನ್ನು ತಪಾಸಣೆ ಮಾಡಿತು.

ಸ್ಥಳೀಯ ಪೊಲೀಸರೊಂದಿಗೆ ತೆರಳಿದ ಆರು ಜನ ಸಿಬಿಐ ಸಿಬ್ಬಂದಿ, ಕೆಲವು ಬತ್ತದ ಚೀಲಗಳನ್ನು ತಪಾಸಣೆ ನಡೆಸಿದರು. ಸಿಬಿಐನ ಇನ್ನೊಂದು ಪ್ರತ್ಯೇಕ ತಂಡ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರ ವ್ಯಾಪಾರ ವಹಿವಾಟು ಕುರಿತ ಮಾಹಿತಿ ಕಲೆ ಹಾಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಹಿತಿ ನೀಡದ ಶ್ರೀನಿವಾಸರೆಡ್ಡಿ: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ, ವಿಚಾರಣೆ ವೇಳೆ ಸಿಬಿಐ ಸಿಬ್ಬಂದಿ ಎಷ್ಟೇ ಕೇಳಿದರೂ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿರುವ ತನ್ನ ಲಾಕರ್‌ನ ಬೀಗದ ಕೈ ಎಲ್ಲಿದೆ? ಎಂಬುದನ್ನು ಹೇಳಲು ನಿರಾಕರಿಸಿದರು ಎನ್ನಲಾಗಿದೆ. ಮಧ್ಯಾಹ್ನ 12ರವರೆಗೂ ಬ್ಯಾಂಕ್‌ನ ಸ್ಟ್ರಾಂಗ್ ರೂಂನಲ್ಲಿರುವ ಲಾಕರ್ ತೆರೆಯಲು ಹರಸಾಹಸ ನಡೆಸಿದ ಅಧಿಕಾರಿಗಳು, ಬೀಗದ ಕೈ ತರಿಸುವಂತೆ ಶ್ರೀನಿವಾಸ ರೆಡ್ಡಿ ಅವರನ್ನು ಕೋರಿದರೂ,`ಎಲ್ಲಿದೆ ಎಂಬುದನ್ನು ಮರೆತಿದ್ದೇನೆ~ ಎಂದು ತಿಳಿಸಿದರು.

ಲಾಕರ್‌ನ ಬೀಗ ದೊರೆಯದ್ದರಿಂದ ಬಾಗಿಲು ತೆರೆಯುವ ಸಾಧ್ಯತೆಗಳ ಬಗ್ಗೆ ಆಲೋಚಿಸಿದ ಸಿಬಿಐ ಅಧಿಕಾರಿಗಳು, ನಗರದಲ್ಲಿ ಬೀಗ, ಬೀಗದ ಕೈ ತಯಾರಿಸುವ ಹಾಗೂ ನಕಲಿ ಬೀಗದ ಕೈ ಸಿದ್ಧಪಡಿಸುವ ಜೋಗೇರ ಸಮುದಾಯದವರನ್ನು ಕರೆಸಿದರು.

ಇಬ್ಬರು ಯುವಕರನ್ನು ಪೊಲೀಸರು ತಮ್ಮ ವಾಹನದಲ್ಲೇ ಕರೆ ತಂದರಾದರೂ, ಅವರು ಲಾಕರ್‌ನ ಬೀಗ ತೆಗೆಯಲು ಶ್ರಮಿಸಿದರೂ ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಆಂಧ್ರದ ಅನಂತಪುರದಿಂದ ಬೀಗದ ಕೈ ತಯಾರಿಸುವ ತಜ್ಞನೊಬ್ಬನನ್ನು ಕರೆ ತಂದು, 2 ಗಂಟೆಯ ವೇಳೆಗೆ ಲಾಕರ್ ಒಡೆದು ತೆರೆಯಲಾಯಿತು. ಲಾಕರ್‌ಗಳಲ್ಲಿ ಅಪಾರ ಪ್ರಮಾಣದ ಚಿನ್ನ, ನಗದು ಇತ್ತು. ಅದನ್ನೆಲ್ಲ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೀರಾಮುಲು ಬಂದದ್ದು ಏಕೆ?: ಏತನ್ಮಧ್ಯೆ, ಸಂಜೆ 6ರ ವೇಳೆಗೆ ಶ್ರೀನಿವಾಸ ರೆಡ್ಡಿ ಅವರ ಪತ್ನಿ ಶ್ರೀಲತಾ, ಮಕ್ಕಳು, ತಂದೆ- ತಾಯಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಆ್ಯಕ್ಸಿಸ್ ಬ್ಯಾಂಕ್‌ಗೆ ಆಗಮಿಸಿ, ಹಿಂದುಗಡೆ ಬಾಗಿಲಿನಿಂದ ಒಳ ಪ್ರವೇಶಿಸಿದರು.

ಈ ಹಿಂದೆ ಓಎಂಸಿ ನಿರ್ದೇಶಕರಾಗಿದ್ದ ಶ್ರೀರಾಮುಲು ಅವರನ್ನು ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಬ್ಯಾಂಕ್‌ಗೆ ಕರೆಸಿದರೇ? ಎಂಬ ಬಗ್ಗೆಯೂ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿವೆ.
ಅಲ್ಲದೆ, ಶ್ರೀಲತಾ ಹೆಸರಿನಲ್ಲೂ ಕೆಲವು ಲಾಕರ್‌ಗಳು ಇರುವುದರಿಂದ, ಸಿಬಿಐ ಸೂಚನೆಯ ಮೇರೆಗೆ ಪೊಲೀಸರೇ ಅವರನ್ನು ಬ್ಯಾಂಕ್‌ಗೆ ಕರೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೆ. 5ರಂದು ಬೆಳಿಗ್ಗೆ ಜನಾರ್ದನ ರೆಡ್ಡಿ ಜತೆಗೆ ಬಂಧನಕ್ಕೆ ಒಳಗಾಗಿರುವ ಶ್ರೀನಿವಾಸರೆಡ್ಡಿ ಸೆ. 12ರವರೆಗೆ ಹೈದರಾಬಾದ್‌ನ ಚಂಚಲ್‌ಗುಡ ಜೈಲಿನಲ್ಲಿದ್ದು, ಸೆ. 13ರಿಂದ ವಿಚಾರಣೆ ಹಿನ್ನೆಲೆಯಲ್ಲಿ ಸಿಬಿಐ ವಶದಲ್ಲಿದ್ದಾರೆ. ಹೈದರಾಬಾದ್‌ಗೆ ಅವರನ್ನು ಭೇಟಿ ಮಾಡಲು ತಂದೆ- ತಾಯಿ, ಮಕ್ಕಳು ಮತ್ತಿತರ ಕುಟುಂಬ ಸದಸ್ಯರು ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲೇ ಅವರ ಭೇಟಿಗೆ ಸಿಬಿಐ ಅವಕಾಶ ನೀಡಿದೆ ಎಂದೂ ತಿಳಿದುಬಂದಿದೆ.

ಸಿಬಿಐ ಕರೆದರೆ ವಿಚಾರಣೆಗೆ ಸಿದ್ಧ ಶ್ರೀರಾಮುಲು
ಬಳ್ಳಾರಿ:
ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ತಮಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದೊಮ್ಮೆ ಕರೆ ಬಂದರೆ ವಿಚಾರಣೆಗೆ ಒಳಪಡಲು ಸಿದ್ಧ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,`ಶ್ರೀರಾಮುಲುಗೆ ಸಿಬಿಐ ನೋಟಿಸ್ ಬಂದಿದೆ. ಅದಕ್ಕೆ ಹೆದರಿ ತಲೆ ಮರೆಸಿಕೊಂಡ್ದ್ದಿದಾರೆ~ ಎಂಬ ವದಂತಿಗಳು ಹರಡಿವೆ. `ಆದರೆ, ನಾನು ಮೂರು ದಿನ ನವದೆಹಲಿಯಲ್ಲಿದ್ದೆ. ಸಿಬಿಐ ಕರೆದರೆ ಹಾಜರಾಗಿ ಅವರ ಪ್ರಶ್ನೆಗಳಿಗೆಲ್ಲ ಉತ್ತರ ನೀಡಿ ಸಹಕರಿಸುವೆ~ ಎಂದರು.

ಸಿಬಿಐ ಬಂಧನದಲ್ಲಿರುವ ಜನಾರ್ದನ ರೆಡ್ಡಿ ಹಾಗೂ  ಶ್ರೀನಿವಾಸ ರೆಡ್ಡಿ ಸದ್ಯ ಕೇವಲ ಆರೋಪಿಗಳಾಗಿದ್ದಾರೆ. ಅವರು ಅಪರಾಧಿ ಎನ್ನುವುದು ಇನ್ನೂ ಸಾಬೀತಾಗಿಲ್ಲ. ಬಂಧಿತರಿಗೆ ಅಗತ್ಯ  ಸೌಲಭ್ಯ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ರಾಜೀನಾಮೆ; ಹಿಂದೆ ಸರಿಯಲ್ಲ: ಈಗಾಗಲೇ ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೆ ಹಿಂದಕ್ಕೆ ಪಡೆಯುವುದಿಲ್ಲ. ವಿಧಾಸನಭೆ ಅಧ್ಯಕ್ಷ ಬೋಪಯ್ಯ ಅವರು ರಾಜೀನಾಮೆ ನೀಡಿದ್ದಕ್ಕೆ ಕಾರಣ ಕೇಳಿದ್ದು, ಶೀಘ್ರವೇ ಸ್ಪಷ್ಟನೆ ನೀಡುತ್ತೇನೆ ಎಂದರು.

ರಾಜೀನಾಮೆ ನೀಡಿದ್ದು ನಾಟಕವಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ರಾಜಕೀಯ ನಡೆಯ ಕುರಿತು ಕೆಲವೇ ದಿನಗಳಲ್ಲಿ ಘೋಷಿಸುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.