ADVERTISEMENT

ಖಾದಿಗೂ ಉದ್ಯೋಗ ಖಾತ್ರಿ: ಪಾಪು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಹುಬ್ಬಳ್ಳಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಖಾದಿ ಕ್ಷೇತ್ರಕ್ಕೂ ವಿಸ್ತರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗದಿದ್ದಲ್ಲಿ ಮತ್ತೆ ಪ್ರಧಾನಿ ಬಳಿಗೆ ನಿಯೋಗ ಒಯ್ಯಲಾಗುವುದು ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ತಿಳಿಸಿದರು.
 
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 32 ಸಾವಿರ ಕುಟುಂಬಗಳು ಖಾದಿಯನ್ನು ನಂಬಿ ಬದುಕುತ್ತಿದ್ದು, ಅವರ ಸ್ಥಿತಿ ದುಸ್ತರವಾಗಿದೆ. ಇಂತಹವರನ್ನೂ ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಗೆ ತರುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಈ ಮೊದಲು 300 ಖಾದಿ ಗ್ರಾಮೋದ್ಯೋಗ ಸಂಘಗಳಿದ್ದು, ಈಗ ಅವುಗಳ ಸಂಖ್ಯೆ 160ಕ್ಕೆ ಇಳಿದಿದೆ. ಅವುಗಳ ಪುನಶ್ಚೇತನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪ್ರಸ್ತಾವ ಸಲ್ಲಿಸಲಾಗಿದೆ. ಹುಬ್ಬಳ್ಳಿಯಲ್ಲಿ `ಗಾಂಧಿ ಗ್ರಾಮ~ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದು, 10 ಎಕರೆ ಜಾಗ ನೀಡುವಂತೆ ಕೋರಲಾಗಿದೆ.

ಗಾಂಧಿ ಬದುಕು ಹಾಗೂ ಖಾದಿ ಕುರಿತ ಪ್ರಾತ್ಯಕ್ಷಿಕೆಯನ್ನು ಈ ಗ್ರಾಮ ಒಳಗೊಳ್ಳಲಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಖಾದಿ ಪುನಶ್ಚೇತನಕ್ಕೆ 7 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸಂತಸದ ಸಂಗತಿ. ಪ್ರಸ್ತುತ ಒಂದು ಲಡಿ ನೂಲಿಗೆ 5 ರೂ. ಹಾಗೂ ಒಂದು ಮೀಟರ್ ಖಾದಿ ಬಟ್ಟೆಗೆ 10 ರೂ. ಸಹಾಯಧನ ನೀಡಲು ಸರ್ಕಾರ ಸಮ್ಮತಿಸಿದೆ. ಅಂತೆಯೇ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಒಂದು ಕೋಟಿ ನೀಡಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸದಾನಂದಗೌಡರಿಗೆ ಪಾಪು ಅಭಿನಂದನೆ ಸಲ್ಲಿಸಿದರು.

ಕೇಂದ್ರ ಸರ್ಕಾರವು ನೇಕಾರರಿಗೆ 3500 ಕೋಟಿ ರೂಪಾಯಿ ಪ್ಯಾಕೆಜ್ ನೀಡಿದಂತೆ ಖಾದಿ ನೇಕಾರರಿಗೂ ಪ್ಯಾಕೆಜ್ ನೀಡಬೇಕು ಎಂದು ಒತ್ತಾಯಿಸಿದರು. ಕಾನೂನು ವಿವಿಯಲ್ಲಿ ಸದ್ಯ ವಾರಕ್ಕೊಂದು ದಿನ ಎಲ್ಲರೂ ಖಾದಿ ಧರಿಸುವ ಸಂಪ್ರದಾಯವನ್ನು ಜಾರಿಗೆ ತಂದಿದ್ದು, ಉಳಿದ ವಿವಿಗಳಲ್ಲೂ ಇದು ಜಾರಿಯಾಗಲಿ ಎಂದು ಅವರು ಆಶಿಸಿದರು.

ಎಂಇಎಸ್ ಹುಚ್ಚರ ಸಂತೆ
`ಬೆಳಗಾವಿ~ ಪದ ಬಳಕೆ ಸಂಬಂಧ ಎಂಇಎಸ್ ಕಾರ್ಯಕರ್ತರ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಪಾಪು, `ಕೆಲವು ಹುಚ್ಚರು ಹಾಗೆ ಮನಬಂದಂತೆ ವರ್ತಿಸುತ್ತಾರೆ. ಅದಕ್ಕೆಲ್ಲ ನಾವು ಸ್ಪಂದಿಸುವ ಅಗತ್ಯವಿಲ್ಲ~ ಎಂದು ಪಾಟೀಲ ಪುಟ್ಟಪ್ಪ ನುಡಿದರು.

ಕಾವೇರಿ ನೀರು ಹಂಚಿಕೆ ಸಂಬಂಧ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ ಸಂದರ್ಭದಲ್ಲೇ ಸರ್ಕಾರ ಮದ್ರಾಸ್ ಒಪ್ಪಂದವನ್ನು ತಿರಸ್ಕರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನುಡಿದರು. ರಾಜ್ಯದ ಜಲಾಶಯದಲ್ಲಿ ನೀರೇ ಇಲ್ಲದಿರುವಾಗ ಹೇಗೆ ನೀರು ಹರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.