ADVERTISEMENT

ಖಾಲಿ ರಸ್ತೆಗಳಲ್ಲಿ ಆಟವಾಡಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 31 ಮೇ 2012, 18:50 IST
Last Updated 31 ಮೇ 2012, 18:50 IST

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ವಿರೋಧ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಗುರುವಾರ ನಗರದ ರಸ್ತೆಗಳು ಖಾಲಿಯಾಗಿದ್ದವು.

ಸದಾ ವಾಹನ ಹಾಗೂ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ವಾಹನ ಹಾಗೂ ಜನ ದಟ್ಟಣೆ ಇರಲಿಲ್ಲ. ಹೆಚ್ಚಿನ ವಾಹನಗಳು ರಸ್ತೆಗಿಳಿಯದ ಕಾರಣ ಅನೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ವಾಹನ ದಟ್ಟಣೆ ಹೆಚ್ಚಾಗಿರುತ್ತಿದ್ದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ರಸ್ತೆ, ಕೆಂಪೇಗೌಡ ರಸ್ತೆ. ಶೇಷಾದ್ರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ರದ್ದಾಗಿದ್ದರಿಂದ ರಸ್ತೆಗಳಲ್ಲಿ ಕಾರುಗಳು, ಬೈಕ್‌ಗಳು, ಆಟೊಗಳು ಸೇರಿದಂತೆ ಕೆಲವು ಖಾಸಗಿ ವಾಹನಗಳು ಮಾತ್ರ ಓಡಾಡುತ್ತಿದ್ದವು.

ಮಾಹಿತಿ ನೀಡದೇ ಸ್ಥಗಿತ: ಬಂದ್ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಗುರುವಾರ ಬೆಳಗ್ಗಿನಿಂದ ನಿಲ್ಲಿಸಿದ್ದರಿಂದ ಕಚೇರಿಗಳಿಗೆ ತೆರಳಬೇಕಿದ್ದ ನೌಕರರು ಪರದಾಡುವಂತಾಯಿತು. ಮಾಹಿತಿ ನೀಡದೇ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

`ಬಂದ್ ಇರುವ ವಿಚಾರ ಗೊತ್ತಿದ್ದರೂ ಬಸ್ ಸಂಚಾರ ಎಂದಿನಂತೆ ಬಸ್ ಸಂಚಾರ ಇರುತ್ತದೆ ಎಂದು ತಿಳಿದು ಕಚೇರಿಗೆ ರಜೆಯನ್ನೂ ಹಾಕದೇ ಓಡೋಡಿ ಬಸ್ ನಿಲ್ದಾಣಕ್ಕೆ ಬಂದೆ. ಇಲ್ಲಿ ನೋಡಿದರೆ ಒಂದು ಬಸ್ ಕೂಡಾ ಇಲ್ಲ. ಬಸ್ ಸಂಚಾರ ನಿಲ್ಲಿಸುವ ವಿಚಾರವನ್ನು ಬಿಎಂಟಿಸಿ ಮೊದಲೇ ತಿಳಿಸದೇ ವಿನಾ ಕಾರಣ ಜನರನ್ನು ತೊಂದರೆಗೆ ಸಿಲುಕಿಸಿದೆ. ಈಗ ಮನೆ ಕಡೆಗೆ ಹೋಗಬೇಕೋ ಅಥವಾ ಯಾವುದಾದರೂ ವಾಹನ ಹಿಡಿದು ಕಚೇರಿಗೆ ಹೋಗಬೇಕೋ ತಿಳಿಯುತ್ತಿಲ್ಲ. ಬಂದ್ ಹಿನ್ನೆಲೆಯಲ್ಲಿ ಮೊದಲೇ ಬಸ್ ಸಂಚಾರ ಸ್ಥಗಿತದ ನಿರ್ಧಾರವನ್ನ ಬಿಎಂಟಿಸಿ ತೆಗೆದುಕೊಳ್ಳಬೇಕಿತ್ತು. ಮೊದಲೇ ಮಾಹಿತಿ ನೀಡದೇ ಬಸ್ ಸಂಚಾರ ನಿಲ್ಲಿಸಿರುವುದರಿಂದ ಅನೇಕರಿಗೆ ತೊಂದರೆಯಾಗಿದೆ~ ಎಂದವರು ನಂದಿನಿ ಲೇಔಟ್ ನಿವಾಸಿ ಶ್ರೀಕಂಠ.

`ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದ ಬಸ್‌ಗಳನ್ನು ವಾಪಸ್ ಡಿಪೋಗೆ ಕಳುಹಿಸುವಂತೆ ಸೂಚನೆ ಬಂತು. ಹೀಗಾಗಿ ಬಸ್‌ಗಳನ್ನು ಡಿಪೋಗೆ ವಾಪಸ್ ಕಳುಹಿಸಲಾಯಿತು. ಸಾರ್ವಜನಿಕರಿಗೆ ಇದರಿಂದ ತೊಂದರೆಯಾದರೂ ಸಂಸ್ಥೆಯ ವಾಹನಗಳ ಸುರಕ್ಷತೆಗಾಗಿ ಈ ಕ್ರಮ ಅನಿವಾರ್ಯ. ಸಂಜೆ ವೇಳೆಗೆ ಬಸ್ ಸಂಚಾರ ಆರಂಭಗೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿದೆ~ ಎಂದು ನಂದಿನಿ ಲೇಔಟ್ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ನಾಗರಾಜ್ ಹೇಳಿದರು.

ಬಂದ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಆಸ್ಪತ್ರೆ, ಔಷಧಿ ಅಂಗಡಿಗಳನ್ನು ಬಿಟ್ಟು ಮಿಕ್ಕೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಕೆಲವೆಡೆ ತಳ್ಳುಗಾಡಿಗಳಲ್ಲಿ ನಡೆಯುತ್ತಿದ್ದ ತರಕಾರಿ ಹಾಗೂ ಹಣ್ಣು ವ್ಯಾಪಾರವನ್ನು ಬಿಟ್ಟರೆ, ಉಳಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು.

ಕ್ರಿಕೆಟ್ ಖುಷಿ: ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುತ್ತಿದ್ದರೆ ಹುಡುಗರ ಪಾಲಿಗೆ ಬಂದ್ ಕ್ರಿಕೆಟ್‌ನ ಖುಷಿ ನೀಡಿತ್ತು. ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ವಿಜಯನಗರ ಬಸ್ ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೇ ನಿಲ್ದಾಣಗಳು ಬಣಗುಟ್ಟುತ್ತಿದ್ದವು. ಖಾಲಿಯಾಗಿದ್ದ ನಂದಿನಿ ಲೇಔಟ್ ಮತ್ತು ಮಹಾಲಕ್ಷ್ಮೀ ಲೇಔಟ್ ಬಸ್ ನಿಲ್ದಾಣಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಾ ಬಸ್ ನಿಲ್ದಾಣಗಳನ್ನು ಆಟದ ಮೈದಾನವಾಗಿಸಿಕೊಂಡಿದ್ದರು. ನಗರದ ಬಹುತೇಕ ಖಾಲಿಯಾಗಿದ್ದ ರಸ್ತೆಗಳಲ್ಲೂ ಹುಡುಗರು ಕ್ರಿಕೆಟ್ ಆಡುತ್ತಾ ಬಂದ್ `ಆಚರಿಸಿ~ದರು.

`ನಮಗೆ ಒಂದನೇ ತಾರೀಖಿನಿಂದ ಶಾಲೆಗೆ ಬರಲು ಹೇಳಿದ್ದಾರೆ. ಹೀಗಾಗಿ ಬಂದ್ ಇಲ್ಲದಿದ್ದರೂ ಇಂದು ನಾವು ಕ್ರಿಕೆಟ್ ಆಡುತ್ತಿದ್ದೆವು. ಬಂದ್ ಎಂಬ ಕಾರಣಕ್ಕೆ ಆಟದ ಮೈದಾನಗಳಲ್ಲಿ ದೊಡ್ಡವರು ಕ್ರಿಕೆಟ್ ಆಡುತ್ತಿದ್ದಾರೆ.

ಹೀಗಾಗಿ ನಾವು ಖಾಲಿ ಇದ್ದ ಬಸ್ ನಿಲ್ದಾಣಕ್ಕೆ ಆಟವಾಡಲು ಬಂದಿದ್ದೇವೆ~ ಎಂದಿದ್ದು ಮಹಾಲಕ್ಷ್ಮಿ ಲೇಔಟ್‌ನ ಈಸ್ಟ್ ವೆಸ್ಟ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ರೂಪೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.