ADVERTISEMENT

ಗಂಡು ಹೆಣ್ಣಾಗುವ ವಿಶಿಷ್ಟ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:49 IST
Last Updated 3 ಮಾರ್ಚ್ 2018, 19:49 IST
ಮೈಸೂರಿನ ರಮ್ಮನಹಳ್ಳಿಯಲ್ಲಿ ಶನಿವಾರ ನಡೆದ ಜಾತ್ರೆಯಲ್ಲಿ ಮಹಿಳೆಯರ ವೇಷ ತೊಟ್ಟಿದ್ದ ಪುರುಷರು ಗಮನ ಸೆಳೆದರು
ಮೈಸೂರಿನ ರಮ್ಮನಹಳ್ಳಿಯಲ್ಲಿ ಶನಿವಾರ ನಡೆದ ಜಾತ್ರೆಯಲ್ಲಿ ಮಹಿಳೆಯರ ವೇಷ ತೊಟ್ಟಿದ್ದ ಪುರುಷರು ಗಮನ ಸೆಳೆದರು   

ಮೈಸೂರು: ಕೆಲವರು ಸೀರೆಯುಟ್ಟು ಕಂಗೊಳಿಸುತ್ತಿದ್ದರೆ, ಮತ್ತೆ ಕೆಲವರು ಜೀನ್ಸ್‌ ಹಾಗೂ ಟಿ–ಶರ್ಟ್‌ ಧರಿಸಿ ತಮಟೆಯ ನಾದಕ್ಕೆ ಹೆಜ್ಜೆಹಾಕುತ್ತಿದ್ದರು. ಕಿವಿಯೋಲೆ, ನೆಕ್ಲೇಸು, ಮಾಂಗಲ್ಯ, ಬಳೆ, ಕಾಲ್ಗೆಜ್ಜೆ ಧರಿಸಿ, ಮಲ್ಲಿಗೆ ಹೂ ಮುಡಿದು ಸೊಂಟವನ್ನು ಬಳುಕಿಸುತ್ತಾ ಮಾದಕ ನಗು ಬೀರಿದರು.

ಆದರೆ ಆ ಚೆಲುವೆಯವರು ಹೆಣ್ಣಲ್ಲ, ಗಂಡು! ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮ­ದಲ್ಲಿ ಶನಿವಾರ ಊರ ದೇವತೆಗಳಾದ ಮಾರಮ್ಮ ಹಾಗೂ ಲಕ್ಷ್ಮಿದೇವಮ್ಮನ ಜಾತ್ರೆ­ಯನ್ನು ವಿಶಿಷ್ಟ­ವಾಗಿ ಆಚರಿಸ­ಲಾಯಿತು.

ಸಾವಿರಾರು ಪುರುಷರು ವಿಚಿತ್ರ ವೇಷ ಧರಿಸಿ ಗಮನ ಸೆಳೆದರು. ಅವರಲ್ಲಿ ಹಲವು ಮಂದಿ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡರು. ಈ ಜಾತ್ರೆಯಲ್ಲಿ ಮಹಿಳೆಯರು ಕುಣಿಯುವ ಹಾಗಿಲ್ಲ. ಪುರುಷರೇ ಮಹಿಳೆಯರ ವೇಷತೊಟ್ಟು ಕುಣಿಯುತ್ತಾರೆ. ಹಲವು ದಶಕಗಳಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ADVERTISEMENT

ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. 15 ದಿನ ನಡೆಯುವ ಜಾತ್ರೆಯ ಕೊನೆಯ ದಿನ ಪುರುಷರು ತಮಗೆ ತೋಚಿದ ವೇಷ ಧರಿಸಿ ಕೈಯಲ್ಲಿ ಕೋಲು ಹಿಡಿದು ಕುಣಿಯುವರು. ಗ್ರಾಮಸ್ಥರು ಈ ಹಬ್ಬಕ್ಕೆ ‘ಕುಣಿಯರ್ದಬ್ಬ’ ಎಂದು ಹೆಸರಿಟ್ಟಿದ್ದಾರೆ.

ಕಾಡು ಜನರಂತೆ ಕೆಲವರು ದೇಹಕ್ಕೆ ಎಲೆಗಳನ್ನು ಕಟ್ಟಿಕೊಂಡು ಗಮನ ಸೆಳೆದರು. ಶಿವ, ಪಾರ್ವತಿ, ಸೀತೆ, ರಾಜ, ರಾಣಿ, ರಾಜಕುಮಾರಿ, ರಾಕ್ಷಸಿ, ಗಾಂಧೀಜಿ, ಚಲನಚಿತ್ರ ತಾರೆಯರ ವೇಷಗಳಲ್ಲಿ ಕಾಣಿಸಿಕೊಂಡು ಮಕ್ಕಳನ್ನು ರಂಜಿಸಿದರು.

ಮಧ್ಯಾಹ್ನ 3ರಿಂದ ಸಂಜೆ 5.30ರ ತನಕ ಸಾವಿರಾರು ಮಂದಿ ಕುಣಿದರು. ‘ಮಾರಮ್ಮನ ಸ್ತುತಿ’ಗೆ ತಕ್ಕಂತೆ ತಮಟೆ ಸದ್ದು ಕೇಳಿಬರುತ್ತಿದ್ದರೆ, ಅದನ್ನು ಅನುಸರಿಸಿ ದೇವಸ್ಥಾನವನ್ನು ಸುತ್ತುತ್ತಾ ಹೆಜ್ಜೆ ಹಾಕಿದರು. ಈ ವೈಭವವನ್ನು ಕಣ್ತುಂಬಿಕೊಳ್ಳಲು ಸಮೀಪದ ಗ್ರಾಮಗಳಿಂದಲೂ ಜನರು ಬಂದಿದ್ದರು.

ಜಾತ್ರೆಯ ವೈಶಿಷ್ಟ್ಯವೇನು?

‘ರಮ್ಮನ­ಹಳ್ಳಿ­ಯಲ್ಲಿ ದಶಕಗಳಿಂದ ಮಾರಮ್ಮನ ಹಬ್ಬ ಆಚರಿಸಲಾಗುತ್ತಿದೆ. ಈ ರೀತಿ ವಿಚಿತ್ರ ವೇಷ ತೊಟ್ಟು ಕುಣಿಯುವ ಸಂಪ್ರದಾಯವನ್ನು ನಾನು ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ. ವೇಷ ತೊಡುವವರು ಮುಂಚಿತವಾಗಿಯೇ ಹರಕೆ ಮಾಡಿಕೊಂಡಿ­ರುತ್ತಾರೆ. ಜಾತ್ರೆಯ ದಿನ ಕುಣಿದು ಮಾರಮ್ಮನನ್ನು ಸಂತೋಷಪಡಿಸುತ್ತಾರೆ’ ಎಂದು ಗ್ರಾಮದ ಹಿರಿಯರಾದ ಚಿಕ್ಕಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.