ADVERTISEMENT

‘ಗಣಿ ಅಕ್ರಮ ಬಗ್ಗೆ ಮಾತನಾಡಲು ಪಿ.ಎಂ, ಸಿ.ಎಂಗೆ ನೈತಿಕತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST

ವಿಜಯಪುರ: ‘ಬಳ್ಳಾರಿಯಲ್ಲಿನ ಭ್ರಷ್ಟಾಚಾರ, ಅದಿರು ಅಕ್ರಮ ಸಾಗಣೆ ಬಗ್ಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ– ಇಬ್ಬರಿಗೂ ನೈತಿಕತೆ ಉಳಿದಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಿಂದಗಿಯಲ್ಲಿ ಪ್ರತಿಕ್ರಿಯಿಸಿದರು.

‘ರೆಡ್ಡಿ ಸಹೋದರರನ್ನು ಮೋದಿ ಸಮರ್ಥಿಸಿಕೊಂಡಿದ್ದು, ಅವರ ಭಾಷಣಗಳಲ್ಲಿ ಯಾವುದೇ ಸ್ಥಿರತೆ ಕಂಡು ಬರುತ್ತಿಲ್ಲ’ ಎಂದು ಟೀಕಿಸಿದರು.

‘ಮೋದಿ ಹೇಳಿದ ಹಾಗೆ ಸಿದ್ದರಾಮಯ್ಯ ಪಕ್ಷಾಂತರಿ. ಚುನಾವಣೆ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಬಂದರೆ ಮುಖ್ಯಮಂತ್ರಿ ನೇತೃತ್ವದಲ್ಲಿ 50–60 ಶಾಸಕರು ಬಿಜೆಪಿಯವರ ಮನೆ ಬಾಗಿಲು ತಟ್ಟಿದರೂ ಆಶ್ಚರ್ಯ ಪಡಬೇಕಿಲ್ಲ’ ಎಂದು ಹೇಳಿದರು.

ADVERTISEMENT

ಐದು ವರ್ಷಗಳ ಹಿಂದೆ ಬಳ್ಳಾರಿಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಅಭಿವೃದ್ಧಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಜೆಡಿಎಸ್‌ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ದೇವೇಗೌಡರನ್ನು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್‌, ಬಿಜೆಪಿ ಪರವೂ ಇಲ್ಲ. ಕಾಂಗ್ರೆಸ್ಸಿಗರ ಕಡೆಗೂ ಇಲ್ಲ. ಎಂದೆಂದೂ ಕನ್ನಡಿಗರ ಪರವಾಗಿರಲಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.