ADVERTISEMENT

ಗಣಿ ಉದ್ಯಮಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:30 IST
Last Updated 22 ಫೆಬ್ರುವರಿ 2011, 17:30 IST

ಹೊಸಪೇಟೆ: ನಗರದ ಎಸ್‌ಎಂಎಸ್‌ಕೆ ಮಿನರಲ್ಸ್ ಮತ್ತು ಲಾಜೆಸ್ಟಿಕ್ಸ್ ಕಚೇರಿ ಹಾಗೂ ಅದರ ಪಾಲುದಾರರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಾದ ಸೋಮನಾಥ ಉಕ್ಕಲಿ ನೇತೃತ್ವದ ಅಧಿಕಾರಿಗಳ ತಂಡ ಪಿ.ಎಂ. ಜಾಹೀದ್ ಮಾಲೀಕತ್ವದ ಕಾಲೇಜು ರಸ್ತೆಯ ಎಸ್‌ಎಂಎಸ್‌ಕೆ ಮಿನರಲ್ಸ್ ಮತ್ತು ಲಾಜೆಸ್ಟಿಕ್ಸ್ ಕಚೇರಿ, ಅರವಿಂದ ನಗರದ ನಿವಾಸ, ಸಾಯಿಬಾಬಾ ವೃತ್ತದಲ್ಲಿರುವ ಪಾಲುದಾರರಾದ ಅಲೀಮ್ ಅವರ ಕಚೇರಿ, ಬಳ್ಳಾರಿ ರಸ್ತೆಯಲ್ಲಿರುವ ಮತ್ತೊಬ್ಬ ಪಾಲುದಾರ ನಹೀಮ್‌ರ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಪಾಲುದಾರರಾದ ಪಿ.ಎಂ ಜಾಹೀದ್, ಪಿ.ಎಂ. ನಹೀಮ್ ಮತ್ತು ಪಿ.ಎಂ ಅಲೀಮ್ ತಮ್ಮ ನಿವಾಸಗಳಲ್ಲಿ ದೊರೆಯದ ಕಾರಣ ಮನೆಗಳಿಗೆ ಪೊಲೀಸ್ ಕಾವಲು ಹಾಕಲಾಗಿದೆ. ಈ ಮೂಲಕ ಮಾಹಿತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಇವರು ಹೊಂದಿರುವ ಬ್ಯಾಂಕ್ ಖಾತೆಗಳು ಹಾಗೂ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  ಕಳೆದವಾರ ಪ್ರತಿಷ್ಠಿತ ಡ್ರೀಮ್ ಲಾಜೆಸ್ಟಿಕ್ಸ್ ಕಂಪೆನಿ ಹಾಗೂ ಮನೆಗಳ ಮೇಲೆ ದಾಳಿ ನಡೆದ ಬೆನ್ನ ಹಿಂದಯೇ ಮತ್ತೆ ನಡೆದ ದಾಳಿ         ಗಣಿಉದ್ಯಮಿಗಳಲ್ಲಿ ಆತಂಕ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.