ADVERTISEMENT

ಗಣಿ ಗುತ್ತಿಗೆ ರ್ದ್ದದು ವಿಳಂಬ: ಆನೆಪಥಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿ ಯ ಸೀಮಾರೇಖೆಯೊಳಗೆ ನಡೆಯುತ್ತಿರುವ 8 ಕರಿಕಲ್ಲು ಗಣಿ ಗುತ್ತಿಗೆ ರದ್ದುಪಡಿಸಲು ರಾಜ್ಯ ಸರ್ಕಾರ ಒಂದು ವರ್ಷ ಕಳೆದರೂ ಕ್ರಮ ಕೈಗೊಳ್ಳದಿರುವ ಪರಿಣಾಮ ವನ್ಯಜೀವಿಗಳಿಗೆ ಆಪತ್ತು ಎದುರಾಗಿದೆ.

ಎಡೆಯರಹಳ್ಳಿ-ದೊಡ್ಡಸಂಪಿಗೆ ಆನೆ ಪಥ (ಎಲಿಫಂಟ್ ಕಾರಿಡಾರ್) ಬಳಿಯೇ ಈ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಕಾಡಾನೆಗಳು ಸೇರಿದಂತೆ ಇತರ ಕಾಡುಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗಿದೆ. 2012ರ ಮಾರ್ಚ್‌ನಲ್ಲಿ ಈ ಗಣಿ ಗುತ್ತಿಗೆಗಳನ್ನು ರದ್ದುಪಡಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಜಿಲ್ಲಾಡಳಿತದಿಂದ ವರದಿ ಸಲ್ಲಿಸಲಾಗಿತ್ತು. ಗಣಿಗಾರಿಕೆಗೆ ಸ್ಫೋಟಕ ಸಾಮಗ್ರಿ ಬಳಸುವ ಪರಿಣಾಮ ವನ್ಯಜೀವಿಗಳ ಬದುಕಿಗೆ ಸಂಚಕಾರ ಎದುರಾಗಿದೆ.

ಕರ್ನಾಟಕ ರಾಜ್ಯ ಅರಣ್ಯ ನಿಯಮಾವಳಿ 1969ರ ನಿಯಮ 41ರ ಉಪ ನಿಯಮ 2ರ ಅನ್ವಯ, ಅರಣ್ಯ ಪ್ರದೇಶದಿಂದ 100 ಮೀಟರ್ ವ್ಯಾಪ್ತಿಯೊಳಗೆ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ. ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ, ಈ ಗಣಿ ಗುತ್ತಿಗೆಗಳಿಗೆ ಅರಣ್ಯ ಪ್ರದೇಶದ ಸೀಮಾರೇಖೆಯೊಳಗೆ ಪರವಾನಗಿ ನೀಡಲಾಗಿದೆ.

ಸರ್ಕಾರದ ಸೂಚನೆ ಅನ್ವಯ ಜಿಲ್ಲೆಯಲ್ಲಿ ಪಟ್ಟಾ ಮತ್ತು ಸರ್ಕಾರಿ ಜಮೀನಿನಲ್ಲಿ ಅರಣ್ಯದಿಂದ 100 ಮೀಟರ್ ವ್ಯಾಪ್ತಿಯೊಳಗೆ ನಡೆಯುತ್ತಿರುವ ಕಲ್ಲುಗಣಿ ಗುತ್ತಿಗೆ ಪತ್ತೆಹಚ್ಚಿ, ರದ್ದುಪಡಿಸುವ ಸಂಬಂಧ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವು, ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿರುವ 8 ಗಣಿ ಗುತ್ತಿಗೆ ಪತ್ತೆಹಚ್ಚಿತ್ತು. 2012ರ ಫೆ. 2ರಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಗುತ್ತಿಗೆ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು.

ಮಲೆಮಹದೇಶ್ವರ ಹಾಗೂ ಎಡೆಯರಹಳ್ಳಿ ಮೀಸಲು ಅರಣ್ಯದ ಸೀಮಾರೇಖೆ ಬಳಿಯೇ ಗಣಿಗಾರಿಕೆಗೆ ಅನುಮತಿ ನೀಡಿರುವುದು ವರದಿಯಿಂದ ಬಹಿರಂಗಗೊಂಡಿದೆ. ಈ ಎರಡು ಮೀಸಲು ಅರಣ್ಯ ಈ ಹಿಂದೆ ಕೊಳ್ಳೇಗಾಲ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಒಳಪಟ್ಟಿದ್ದವು. ಇತ್ತೀಚೆಗೆ ಈ ಅರಣ್ಯ ವಿಭಾಗವನ್ನು `ಮಲೆಮಹದೇಶ್ವರ ವನ್ಯಜೀವಿಧಾಮ' ಎಂದು ಘೋಷಿಸಲಾಗಿದೆ.

ಅಧಿಕಾರಿಗಳ ತಂಡ ಸಲ್ಲಿಸಿರುವ ವರದಿಯು `ಪ್ರಜಾವಾಣಿ'ಗೆ ಲಭ್ಯವಾಗಿದೆ. ಈ ವರದಿ ಅನ್ವಯ ಪೊನ್ನಾಚಿ ಗ್ರಾಮದ ಸರ್ವೇ ನಂ. 24ರಲ್ಲಿ 2 ಎಕರೆ, ಸರ್ವೇ ನಂ. 1ರಲ್ಲಿ 7.2 ಎಕರೆ, ಸರ್ವೇ ನಂ. 96ರಲ್ಲಿ 10 ಎಕರೆ, ಸರ್ವೇ ನಂ. 96ಬಿ ಯಲ್ಲಿ 11.32 ಎಕರೆ, ಸರ್ವೇ ನಂ. 86ಬಿ ಯಲ್ಲಿ 8 ಎಕರೆ ಹಾಗೂ ಹುತ್ತೂರು ಗ್ರಾಮದ ಸರ್ವೇ ನಂ. 377/2ರಲ್ಲಿ 2 ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರಿ ಜಮೀನಿನಲ್ಲಿಯೇ ಈ 6 ಗಣಿ ಗುತ್ತಿಗೆಗೆ ಪರವಾನಗಿ ನೀಡಲಾಗಿದೆ.

ಮೀಣ್ಯಂ ಗ್ರಾಮದ ಸರ್ವೇ ನಂ. 64/3ರಲ್ಲಿ 3 ಎಕರೆ, ಸರ್ವೇ ನಂ. 64/5ರಲ್ಲಿ 4.5 ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಪಟ್ಟಾ ಜಮೀನು ವ್ಯಾಪ್ತಿಯಲ್ಲಿ ಈ ಎರಡು ಗಣಿ ಗುತ್ತಿಗೆ ನೀಡಲಾಗಿದೆ. ಗಣಿಗಾರಿಕೆಯಿಂದ ವನ್ಯಜೀವಿಗಳಿಗೆ ಅಪಾಯ ಕಟ್ಟಿಟ್ಟಬುತ್ತಿ. ಈ ಹಿನ್ನೆಲೆಯಲ್ಲಿ ಗಣಿ ಗುತ್ತಿಗೆ ರದ್ದುಪಡಿಸುವಂತೆ ಈ ಹಿಂದೆಯೇ ಜಿಲ್ಲಾಧಿಕಾರಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು, ರಾಜ್ಯ ನಿರ್ದೇಶಕರು ಹಾಗೂ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಆದರೆ, ಇಂದಿಗೂ ಗಣಿ ಗುತ್ತಿಗೆ ರದ್ದುಪಡಿಸಿಲ್ಲ' ಎಂದು ಮಲೆಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವೀದ್ ಮುಮ್ತಾಜ್ `ಪ್ರಜಾವಾಣಿ'ಗೆ ತಿಳಿಸಿದರು. ಪ್ರಸ್ತುತ ಕೊಳ್ಳೇಗಾಲ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ವನ್ಯಜೀವಿಧಾಮದ ಮಾನ್ಯತೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪುನಃ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತ್ವರಿತವಾಗಿ ಗಣಿಗುತ್ತಿಗೆ ರದ್ದುಪಡಿಸಲು ಕೋರಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT