ADVERTISEMENT

ಗಣಿ ದೂಳು: ಪರಿಸರ ಪುನರ್ ನಿರ್ಮಾಣ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಗುಬ್ಬಿ: ತುಮಕೂರು ಜಿಲ್ಲೆಯಲ್ಲಿ ಗಣಿಗಾರಿಕೆ ಮಾಡಲು ಈಚೆಗೆ `ಎ' ವರ್ಗದ ಒಂದು ಗಣಿ ಕಂಪನಿಗೆ ಅನುಮತಿ ಸಿಕ್ಕಿದೆ. ಗಣಿಗಾರಿಕೆ ನಡೆಸುವ ಮುನ್ನ ಸುತ್ತಲ ಜನವಸತಿ, ಪರಿಸರ ಪುನರ್‌ನಿರ್ಮಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಪರಿಸರ ಪುನರ್ ನಿರ್ಮಾಣದ ಕುರುಹು ಮಾತ್ರ ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಗುಬ್ಬಿ ತಾಲ್ಲೂಕಿನ ಮುಸಕೊಂಡ್ಲಿ, ಮಾವಿನಹಳ್ಳಿ, ಬ್ಯಾಟಪ್ಪನಪಾಳ್ಯ, ಹೊನ್ನೇನಹಳ್ಳಿ, ದೊಡ್ಡಕೊಂಡ್ಲಿ, ಹರೇನಹಳ್ಳಿ, ಕಾರೇಕುರ್ಚಿ ಹಳ್ಳಿಗಳ ರೈತರ ಜಮೀನುಗಳು ಗಣಿಕಾರಿಕೆಯಿಂದಾಗಿ ಸಂಕಷ್ಟ ಎದುರಿಸುತ್ತಿವೆ.  ಗಾಳಿಯಲ್ಲಿ ದೂಳಿನ ಅಂಶ ಹೆಚ್ಚಾಗಿರುವುದರಿಂದ ಈ ಪ್ರದೇಶದ ಜನ- ಜಾನುವಾರುಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.

`ಗಣಿಗಾರಿಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಯಲ್ಲಿ ನಡೆದರೂ ಗುಬ್ಬಿ ತಾಲ್ಲೂಕಿಗೆ ಸೇರಿದ ಹಳ್ಳಿಗಳ ಮೇಲೆ ಕೆಂಪು ದೂಳು ಬೀಳುತ್ತಿದೆ. ಈ ಕುರಿತು ಯಾರೂ ಗಮನ ಹರಿಸುತ್ತಿಲ್ಲ' ಎನ್ನುತ್ತಾರೆ ಹರೇನಹಳ್ಳಿಯ ರೇಣುಕಪ್ಪ.

ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ ಸಂಗ್ರಹವಾಗಿರುವ ಗಣಿ ಮಣ್ಣನ್ನು ಹರಾಜು ಮೂಲಕ ಹೊರ ಸಾಗಿಸಲಾಗುತ್ತಿದೆ. ದೂಳಿನ ಹಾವಳಿ ಇದರಿಂದಲೇ ಹೆಚ್ಚಾಗಿದೆ. ಪೂರ್ಣ ಪ್ರಮಾಣದಲ್ಲಿ ಗಣಿಗಾರಿಕೆ ಪ್ರಾರಂಭವಾದರೆ ಜನರ ಕಷ್ಟ ಮತ್ತಷ್ಟು ಹೆಚ್ಚುತ್ತದೆ.


ಗಣಿಗಾರಿಕೆಗಾಗಿಯೇ ಅಬ್ಬಿಗೆಗುಡ್ಡದಿಂದ ಬೆಟ್ಟದಗೇಟ್‌ವರೆಗೆ (ಗುಡ್ಡದಪಾಳ್ಯ) 12 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಆದರೂ ಗಣಿ ಲಾರಿಗಳು ಹತ್ತಿರದ ದಾರಿಗಾಗಿ ಮುಸಕೊಂಡ್ಲಿ-  ಕೊಂಡ್ಲಿ- ಹೊನ್ನೆನಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿವೆ. ದೂಳು ಏಳದಂತೆ ನಿಯಂತ್ರಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.

`ನಮ್ಮ ಊರಿನೊಳಗೆ ಬರದಂತೆ ಚರಂಡಿ ಮತ್ತು ಉಬ್ಬು ನಿರ್ಮಿಸಿದ್ದೇವೆ. ಆದರೆ ರಾತ್ರಿ ಹೊತ್ತು ಸಂಚರಿಸುವ ಲಾರಿಗಳನ್ನು ತಡೆಯುವವರು ಯಾರು? ಎಂದು ಪ್ರಶ್ನಿಸುತ್ತಾರೆ ಹೊನ್ನೆನಹಳ್ಳಿಯ ಮಹದೇವಯ್ಯ.

`ಈ ಪ್ರದೇಶದ ಹಳ್ಳಿಗಳಲ್ಲಿ ಎಲ್ಲ ವಯಸ್ಸಿನವರಲ್ಲೂ ಆಸ್ತಮಾ ಕಾಣಿಸಿಕೊಂಡಿದೆ. ಪರಿಸರ, ಕೃಷಿ, ತೋಟಗಾರಿಕೆ, ಅಂತರ್ಜಲ, ಜೀವ ವೈವಿಧ್ಯತೆ ಮತ್ತು ಜನಜೀವನ, ಆರೋಗ್ಯದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ಸರಿಪಡಿಸಿ, ಗಣಿಗಾರಿಕೆ ನಡೆಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ರೂ 10 ಸಾವಿರ ಕೋಟಿ ತೆಗೆದಿರಿಸಿದೆ. ಅದರಲ್ಲಿ ಶೇ 10.2ರಷ್ಟು ಹಣ ಜಿಲ್ಲೆಯ ಗಣಿ ಬಾಧಿತ ಹಳ್ಳಿಗಳ ಅಭಿವೃದ್ಧಿಗೆ ಮೀಸಲಾಗಿದೆ. ಆದರೆ ಇಲ್ಲಿಯವರೆಗೂ ಸುತ್ತಲಿನ ಪ್ರದೇಶದ ಅರಣ್ಯ ಭೂಮಿಯ ಸ್ಥಿತಿಗತಿಯ ಪೂರ್ಣ ಅಂದಾಜು ಮತ್ತು ಪುನರುಜ್ಜೀವನದ ಯೋಜನೆ ಸಿದ್ಧವಾಗಿಲ್ಲ' ಎಂದು ವಿಷಾದಿಸುತ್ತಾರೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕ್ರಿಯಾ ಸಮಿತಿಯ ನಂಜುಡಪ್ಪ.

ಗಣಿಗಾರಿಕೆಯಿಂದಾಗಿ ಈ ಭಾಗದಲ್ಲಿ ಕೃಷಿ ನಶಿಸುತ್ತಿದೆ. ರೈತರು ತುಂಡು ಭೂಮಿ ಮಾರಿ ನಗರದತ್ತ ವಲಸೆ ಹೋಗಿದ್ದಾರೆ.
ಶಿವಸಂದ್ರ, ಮೂಡಲಪಾಳ್ಯ, ಎಮ್ಮೆದೊಡ್ಡಿ, ಗುಡ್ಡದ ಓಬಳಪುರ, ದೊಡ್ಡಗುಣಿ, ಬಡವನಪಾಳ್ಯ, ಕಂಚಿಗಾನಹಳ್ಳಿ, ಕೊಂಡ್ಲಿಕ್ರಾಸ್ ಹಳ್ಳಿಗಳ ರೈತರ ಜಮೀನುಗಳು ಗಣಿಗಾರಿಕೆಯಿಂದ ಫಲವತ್ತತೆ ಕಳೆದುಕೊಂಡಿವೆ. ಕೆರೆಗಳಿಗೆ ಬರುವ ಮಳೆನೀರಿನ ಹಳ್ಳಗಳೂ ಗಣಿ ದೂಳಿನಲ್ಲಿ ಮುಚ್ಚಿಹೋಗಿವೆ.
ಕೃಷಿ ಕೈಗೆ ಹತ್ತುತ್ತಿಲ್ಲ. ಹೀಗಾಗಿ ಆರ್ಥಿಕವಾಗಿ ಮುಂದೆ ಬರಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಪರಿಸರವಾದಿ ಮತ್ತು ಸಮಾಜ ಪರಿವರ್ತನಾ ಸಮುದಾಯದ ಕಾರ್ಯಕರ್ತ ಎನ್.ನಂಜುಂಡಯ್ಯ ಹೇಳುತ್ತಾರೆ.

ನೂರೆಂಟು ಗೋಳು

ADVERTISEMENT

10 ವರ್ಷಗಳ ಗಣಿಗಾರಿಕೆಯ ದುಷ್ಟಪರಿಣಾಮ ಇದೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೃಷಿ, ತೋಟಗಾರಿಕೆ, ಅಂತರ್ಜಲ, ಆರೋಗ್ಯ, ರಸ್ತೆ, ಅಭಿವೃದ್ಧಿ, ಶಿಕ್ಷಣ, ಕುಡಿಯುವ ನೀರು ಕಲುಷಿತಗೊಂಡಿವೆ.  ಕೆರೆಗಳು ನೀರು ಕಂಡಿಲ್ಲ. ಗೋಮಾಳ, ಹುಲ್ಲುಗಾವಲು ಮರೆಯಾಗಿವೆ. ಕುಡಿಯುವ ನೀರಿನ ನಲ್ಲಿಗಳು ಕಟ್ಟಿ ಹೋಗಿವೆ. ಪ್ರತಿ ಊರ ಓಣಿ, ಚರಂಡಿ, ರಸ್ತೆಗಳನ್ನು ಸರಿಪಡಿಸಬೇಕು ಎಂದು  ಸ್ಥಳೀಯರು ಒತ್ತಾಯಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.