ಬಳ್ಳಾರಿ: ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ರಾಜಕೀಯಕೆ ಧುಮುಕಲಿದ್ದು, ಅದಕ್ಕೆ ಅಗತ್ಯವಿರುವ ಪೂರ್ವಭಾವಿ ಸಿದ್ಧತೆಗಳು ನಡೆದಿವೆ.
ಭಾನುವಾರ ನಗರದ ಹವಂಭಾವಿಯಲ್ಲಿನ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ನಡೆದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದ ಲಕ್ಷ್ಮೀ ಅರುಣಾ , ಪಕ್ಷದ ಮುಖಂಡರ ಬಂಧನದಿಂದ ಎದುರಾಗಿರುವ ಸಂಕಷ್ಟ ಸ್ಥಿತಿಯಲ್ಲಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಿರುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
`11 ತಿಂಗಳ ಹಿಂದೆ ಜಿ.ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಶಾಸಕರಾದ ಟಿ.ಎಚ್. ಸುರೇಶಬಾಬು, ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಿರುವುದರಿಂದ ಪಕ್ಷಕ್ಕೆ ಭವಿಷ್ಯವೇ ಇಲ್ಲ ಎಂದು ಭಾವಿಸುವ ಅಗತ್ಯವಿಲ್ಲ. ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತು, ಚುನಾವಣೆ ಎದುರಿಸೋಣ~ ಎಂದು ಅವರು ಕಂಪ್ಲಿ, ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಶಾಸಕ, ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು, ಸಂಸದೆ ಜೆ.ಶಾಂತಾ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಮಾಜಿ ಅಧ್ಯಕ್ಷ ಎನ್.ರುದ್ರಗೌಡ ಮತ್ತಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು, ಪ್ರಮುಖ ನಾಯಕರ ಗೈರು ಹಾಜರಿಯಲ್ಲಿ ಪಕ್ಷವನ್ನು ಮುನ್ನಡೆಸುವ ಬಗೆಯ ಕುರಿತು ಸಮಗ್ರವಾಗಿ ಚರ್ಚಿಸಿದರು ಎನ್ನಲಾಗಿದೆ.
`ಇತ್ತೀಚಿನ ಬೆಳವಣಿಗೆಗಳಿಂದ ಯಾರೂ ಕಂಗಾಲಾಗುವುದು ಬೇಡ. ಕಾರ್ಯಕರ್ತರ, ಅಭಿಮಾನಿಗಳ ಬೆಂಬಲ ಇದ್ದರೆ ಪಕ್ಷ ಸರಾಗವಾಗಿ ಮುನ್ನಡೆಯಲಿದೆ. ಅನಿವಾರ್ಯ ಸ್ಥಿತಿ ಎದುರಾದರೆ, ಕುಟುಂಬ ಸದಸ್ಯರ ಬದಲಿಗೆ ಪಕ್ಷವನ್ನು ಮುನ್ನಡೆಸಲು ಸಿದ್ಧ~ ಎಂದು ಲಕ್ಷ್ಮೀ ಅರುಣಾ ಸ್ಪಷ್ಟಪಡಿಸಿದರು ಎಂದು ಪಕ್ಷದ ಕೆಲವು ಮುಖಂಡರು ~ಪ್ರಜಾವಾಣಿ~ಗೆ ಸ್ಪಷ್ಟಪಡಿಸಿವೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಸೋನಿಯಾ ಗಾಂಧಿ ರಾಜಕೀಯಕ್ಕೆ ಧುಮುಕಿ, ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ನಿಧನದ ನಂತರ ಅವರ ಪತ್ನಿ ರಾಜಕೀಯ ಪ್ರವೇಶಿಸಿ ಚುನಾವಣೆ ಎದುರಿಸಿದ್ದಾರೆ.
ಜಗನ್‌ಮೋಹನ ರೆಡ್ಡಿ ಅವರ ಬಂಧನದ ನಂತರ ಅವರ ಸೋದರಿ ಪಕ್ಷ ಮುನ್ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರಂತೆಯೇ ಕರ್ನಾಟಕದಲ್ಲೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಬಹುತೇಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.