ADVERTISEMENT

ಗುಂಡಿಕ್ಕಿ ಗೌರಿ ಲಂಕೇಶ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 20:11 IST
Last Updated 5 ಸೆಪ್ಟೆಂಬರ್ 2017, 20:11 IST
ಗುಂಡಿಕ್ಕಿ ಗೌರಿ ಲಂಕೇಶ್‌ ಹತ್ಯೆ
ಗುಂಡಿಕ್ಕಿ ಗೌರಿ ಲಂಕೇಶ್‌ ಹತ್ಯೆ   

ಬೆಂಗಳೂರು: ಚಿಂತಕಿ, ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಮನೆ ಮುಂದೆಯೇ ಮಂಗಳವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಗೌರಿ ಅವರು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ ಟೌನ್‌ಶಿಪ್‌ನಲ್ಲಿ ನೆಲೆಸಿದ್ದರು. ‘ಗೌರಿ ಲಂಕೇಶ್‌ ಪತ್ರಿಕೆ’ಯ ಸಂಪಾದಕರಾಗಿದ್ದ ಅವರು, ಕೆಲಸ ಮುಗಿಸಿ ರಾತ್ರಿ 7.45ರ ಸುಮಾರಿಗೆ ಕಾರಿನಲ್ಲಿ (ಕೆಎ 05 ಎಂಆರ್ 3782) ಮನೆಗೆ ಮರಳುತ್ತಿದ್ದರು.

ಈ ವೇಳೆ ಇಬ್ಬರು ಹಂತಕರು ‘ಹೊಂಡೊ ಆ್ಯಕ್ಟಿವಾ’ ಸ್ಕೂಟರ್‌ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅವರು ಕಾರು ನಿಲ್ಲಿಸಿ ಮನೆ ಬೀಗ ತೆಗೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇನ್ನೊಬ್ಬ ಯುವಕ ಸಂಜೆಯಿಂದಲೂ ಅವರ ಮನೆ ಬಳಿಯೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂಗತಿ ಸ್ಥಳೀಯರ ವಿಚಾರಣೆಯಿಂದ ತಿಳಿದು ಬಂದಿದೆ.

ಹಂತಕರು ಹಾರಿಸಿದ ಏಳು ಗುಂಡುಗಳಲ್ಲಿ ಮೂರು ಗುಂಡುಗಳು ಗೌರಿ ಅವರ ದೇಹವನ್ನು ಹೊಕ್ಕಿವೆ. ಎರಡು ಗುಂಡುಗಳು ಎದೆಗೆ ಬಿದ್ದರೆ, ಮತ್ತೊಂದು ಗುಂಡು ಕಿಬ್ಬೊಟ್ಟೆಗೆ ತಗುಲಿದೆ. ಕುಸಿದು ಬಿದ್ದ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದು ನಾಲ್ಕು ಗುಂಡುಗಳು ಮನೆಯ ಗೋಡೆ ಮೇಲೆ ಬಿದ್ದಿವೆ.

ಗುಂಡಿನ ಸದ್ಧು ಕೇಳಿ ನೆರೆಹೊರೆಯವರು ಕೂಡಲೇ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಗೌರಿ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಶ್ವಾನದಳ, ಬೆರಳಚ್ಚು ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹಂತಕರ ಪತ್ತೆಗೆ ಪಶ್ಚಿಮ ವಿಭಾಗದ ಪೊಲೀಸರು ಹಾಗೂ ಸಿಸಿಬಿ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳು ರಚನೆಯಾಗಿವೆ.

ನಗರದಲ್ಲಿ ನಾಕಾಬಂದಿ: ‘ಹತ್ಯೆ ನಡೆದ ಕೂಡಲೇ ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದೇವೆ. ಹೀಗಾಗಿ, ಹಂತಕರು ನಗರ ಬಿಟ್ಟು ಹೋಗಿರಲು ಸಾಧ್ಯವಿಲ್ಲ. ನಗರದಲ್ಲಿ ಮಾತ್ರವಲ್ಲದೆ, ಹೊರವಲಯಗಳಲ್ಲೂ ಸಿಬ್ಬಂದಿ ನಾಕಾಬಂದಿ ಹಾಕಿಕೊಂಡು ವಾಹನಗಳ ತಪಾಸಣೆ ಜತೆಗೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಬಸ್ ಹಾಗೂ ರೈಲು ನಿಲ್ದಾಣಗಳಲ್ಲೂ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಲಪಂಥೀಯ ವಿರೋಧಿ ಧೋರಣೆ ಹೊಂದಿದ್ದ ಗೌರಿ ಲಂಕೇಶ್, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮಾತ್ರವಲ್ಲದೇ ನೂರ್ ಜುಲ್ಫಿಕರ್, ಸಿರಿಮನೆ ನಾಗರಾಜ್ ಸೇರಿದಂತೆ ಹಲವು ನಕ್ಸಲ್ ಮುಖಂಡರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

**

ಕಲಬುರ್ಗಿ ಹತ್ಯೆಗೆ ಸಾಮ್ಯತೆ

ಪ್ರಗತಿಪರ ವಿಚಾರಧಾರೆ ಹೊಂದಿದ್ದ ಎಂ.ಎಂ.ಕಲಬುರ್ಗಿ ಅವರನ್ನು 2016ರ ಆಗಸ್ಟ್ 30 ರಂದು ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಮನೆಯಲ್ಲಿಯೇ ಇಬ್ಬರು ಹಂತಕರು ಗುಂಡಿಕ್ಕಿ ಕೊಂದಿದ್ದರು.

ಗೌರಿ ಲಂಕೇಶ್ ಅವರನ್ನು ಸಹ ಅವರ ಮನೆಯಲ್ಲೇ ತಲೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಇಲ್ಲೂ ಇಬ್ಬರೇ ಹಂತಕರಿದ್ದಾರೆ. ಹೀಗೆ, ಎರಡೂ ಪ್ರಕರಣಗಳಲ್ಲಿ ಸಾಕಷ್ಟು ಸಾಮ್ಯತೆಗಳು ಕಂಡು ಬಂದಿರುವುದರಿಂದ ವೈಚಾರಿಕ ಭಿನ್ನಾಭಿಪ್ರಾಯದಿಂದಲೇ ಹತ್ಯೆ ನಡೆದಿದೆ ಎನ್ನುವ ಅನುಮಾನ ಪೊಲೀಸ್‌ ವಲಯದಲ್ಲಿ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.