ಚಿಕ್ಕೋಡಿ: ತಾಲ್ಲೂಕಿನ ಮಾನಕಾಪುರ ಗ್ರಾಮದಲ್ಲಿರುವ ಖಾಸಗಿ ಪಾನ್ ಮಸಾಲ ಕಾರ್ಖಾನೆ ಕಾರ್ಮಿಕರು ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಶಾಹೀರ ಯಡವಾನ ಎಂಬ ಕಾರ್ಮಿಕರೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಒಡ್ಡಿದರೆ, ಮತ್ತೊಬ್ಬ ಕಾರ್ಮಿಕ ನೇಣಿಗೆ ಶರಣಾಗಬೇಕಾಗುತ್ತದೆ ಎಂದು ಹಗ್ಗ ಪ್ರದರ್ಶಿಸಿದರು.
`ನಾವು ಸುಮಾರು 25 ವರ್ಷಗಳಿಂದ ಗುಟ್ಕಾ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ನಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗಿಲ್ಲ. ಸದ್ಯ ಪ್ರತಿ ಕಾರ್ಮಿಕನೂ ತಿಂಗಳಿಗೆ 8,000 ದಿಂದ 10,000 ರೂಪಾಯಿವರೆಗೆ ಸಂಬಳ ಪಡೆಯುತ್ತಿದ್ದೇವೆ.
ನೂರಾರು ಕುಟುಂಬಗಳು ಈ ಕಾರ್ಖಾನೆಯನ್ನು ಅವಲಂಬಿಸಿವೆ. ಸರ್ಕಾರ ಗುಟ್ಕಾ ನಿಷೇಧ ಮಾಡಿದರೆ ಈ ಕುಟುಂಬಗಳ ಜೀವನ ಅತಂತ್ರವಾಗಲಿದೆ. ಅಲ್ಲದೇ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಕಾರ್ಖಾನೆ ಸ್ಥಾಪಿಸಿರುವ ಉದ್ಯಮಿಗಳಿಗೂ ನಷ್ಟವಾಗಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂತಗೆದುಕೊಳ್ಳಬೇಕು' ಎಂದು ಎಂದು ಕಾರ್ಮಿಕ ಜ್ಞಾನೇಶ್ವರ ಭಗತ್ ಒತ್ತಾಯಿಸಿದರು.
`ದುಬಾರಿ ಬೆಲೆಯ ಮದ್ಯ, ವೈನ್, ಪ್ರಸಿದ್ಧ ಕಂಪೆನಿಗಳ ಸಿಗರೇಟ್ ಬಳಕೆಯನ್ನು ತಡೆಯದ ಸರ್ಕಾರ ಎರಡು ರೂಪಾಯಿ ಬೆಲೆಯ ಗುಟ್ಕಾ ನಿಷೇಧಿಸುತ್ತಿರುವ ಹಿಂದೆ ಷಡ್ಯಂತ್ರವಿದೆ. ಇಂತಹ ಅನ್ಯಾಯವನ್ನು ಕಾರ್ಮಿಕರು ಸಹಿಸಿಕೊಳ್ಳುವುದಿಲ್ಲ. ಗುಟ್ಕಾ ನಿಷೇಧ ನಿರ್ಣಯವನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆಯಂತಹ ಉಗ್ರ ಪ್ರತಿಭಟನೆ ನಡೆಸುತ್ತೇವೆ' ಎಂದು ಮಲ್ಲು ಖೋತ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.