ADVERTISEMENT

ಗುತ್ತೇದಾರ್ ಕೊಲೆ ಪ್ರಕರಣ:ಜೀವಾವಧಿಗೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:35 IST
Last Updated 7 ಅಕ್ಟೋಬರ್ 2011, 19:35 IST

ಬೆಂಗಳೂರು: ಶಾಸಕ ಸುಭಾಷ ಗುತ್ತೇದಾರ್ ಸಹೋದರ, ಅಬಕಾರಿ ಗುತ್ತಿಗೆದಾರ ಅಶೋಕ್ ಗುತ್ತೇದಾರ್ ಕೊಲೆ ಪ್ರಕರಣದಲ್ಲಿ ಅಶೋಕ್ ಪತ್ನಿ ಪದ್ಮಾವತಿ ಮತ್ತು ಆಕೆಯ ಪ್ರಿಯಕರ ಸುಭಾಷ್ ಪಾಟೀಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತ್ವರಿತ ನ್ಯಾಯಾಲಯ 2006ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

2002ರ ಜೂನ್ 15ರಂದು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಗಳು ಅಶೋಕ್ ಗುತ್ತೇದಾರ್ ಅವರನ್ನು ಗುಂಡಿಕ್ಕಿ ಕೊಲೆಗೈದಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ಆರನೇ ತ್ವರಿತ ನ್ಯಾಯಾಲಯ ಇಬ್ಬರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪದ್ಮಾವತಿ ಮತ್ತು ಸುಭಾಷ್ ಪಾಟೀಲ್ ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಮತ್ತು ನ್ಯಾಯಮೂರ್ತಿ ಜಾವೇದ್ ರಹೀಂ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿತು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ತ್ವರಿತ ನ್ಯಾಯಾಲಯದ ತೀರ್ಮಾನ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎರಡೂ ಮೇಲ್ಮನವಿಗಳನ್ನು ವಜಾ ಮಾಡಿದೆ.

ಅಶೋಕ್ ಗುತ್ತೇದಾರ್ ಪತ್ನಿ ಪದ್ಮಾವತಿ ಮತ್ತು ಗುಲ್ಬರ್ಗದ ಎಂ.ಆರ್.ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸುಭಾಷ್ ಪಾಟೀಲ್ ಪ್ರೀತಿಸುತ್ತಿದ್ದರು. ಬಳಿಕ ಇಬ್ಬರೂ ಸೇರಿ ಅಶೋಕ್ ಅವರನ್ನು ಹತ್ಯೆಮಾಡಿ, ಅವರ ಆಸ್ತಿಯನ್ನು ಬಳಸಿಕೊಳ್ಳಲು ಸಂಚು ನಡೆಸಿದ್ದರು.

ಪೂರ್ವಯೋಜನೆಯಂತೆ ಅಶೋಕ್ ಅವರು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ವ್ಯಾಪ್ತಿಯಲ್ಲಿರುವ ತಮ್ಮ ಮಾವನ ಮನೆಗೆ ಬಂದ ಸಂದರ್ಭದಲ್ಲಿ ಪದ್ಮಾವತಿ ಮತ್ತು ಸುಭಾಷ್ ಸೇರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇಬ್ಬರ ನಡುವಿನ ಅನೈತಿಕ ಸಂಬಂಧ ಮತ್ತು ಆಸ್ತಿ ಲಪಟಾಯಿಸುವ ಉದ್ದೇಶವೇ ಅಶೋಕ್ ಅವರ ಹತ್ಯೆಗೆ ಕಾರಣವಾಗಿತ್ತು ಎಂಬುದು ತನಿಖೆಯಲ್ಲಿ ಬಯಲಿಗೆ ಬಂದಿತ್ತು.

`ಪ್ರಕರಣದ ವಿಚಾರಣೆ ನಡೆಸಿರುವ ತ್ವರಿತ ನ್ಯಾಯಾಲಯದ ನ್ಯಾಯಾಧೀಶರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅನೈತಿಕ ಸಂಬಂಧ ಮತ್ತು ಆಸ್ತಿ ಲಪಟಾಯಿಸುವ ಉದ್ದೇಶದಿಂದಲೇ ಆರೋಪಿಗಳು ಅಶೋಕ್ ಅವರನ್ನು ಹತ್ಯೆ ಮಾಡಿರುವುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ತ್ವರಿತ ನ್ಯಾಯಾಲಯದ ಆದೇಶ ಸಮರ್ಪಕವಾಗಿಯೇ ಇದೆ~ ಎಂದು ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.